ಮೊಬೈಲ್ ಬಳಸಿ VAO ಪರೀಕ್ಷೆಯಲ್ಲಿ ಅಕ್ರಮ ಕೇಸ್: 4 ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಸಿಪಿಐ ಹಾಗೂ ಪಿಎಸ್‌ಐಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು

ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ 4 ಹೆಡ್‌ಕಾನ್ಸ್‌ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ, ಓರ್ವ ಸಿಪಿಐ ಮತ್ತು ಇಬ್ಬರು ಪಿಎಸ್‌ಐಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Haveri VAO Exam Scam: Four Head Constables Suspended, Disciplinary Action Recommended Against CPI and PSIs
ಮೊಬೈಲ್ ಬಳಸಿ VAO ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಶಂಕರ ಬನ್ನೂರು ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ
Updated on: 

ಹಾವೇರಿ: ನಡೆದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯ ವೇಳೆ ಹಾವೇರಿ ಜಿಲ್ಲೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ, ಓರ್ವ ಸಿಪಿಐ ಮತ್ತು ಇಬ್ಬರು ಪಿಎಸ್‌ಐಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹೆಡ್‌ಕಾನ್ಸ್‌ಟೆಬಲ್‌ಗಳ ಅಮಾನತು

ಪರೀಕ್ಷಾ ಕೇಂದ್ರದೊಳಗೆ ಹಾನಗಲ್ ಪಟ್ಟಣದ ಶಂಕರ್ ಬನ್ನೂರು ಎಂಬ ಅಭ್ಯರ್ಥಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದ ಮತ್ತು ಭದ್ರತಾ ತಪಾಸಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಹೆಡ್‌ಕಾನ್ಸ್‌ಟೆಬಲ್‌ಗಳಾದ ಸಿ.ಎ. ಮರೆಣ್ಣನವರ, ವಿ.ಸಿ. ಹೊನ್ನಾಳಿ, ಆರ್.ಎಂ. ಮಣಕವಾಡ ಮತ್ತು ಎಸ್.ಆರ್. ನಾಗನೂರು ಅವರನ್ನು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅಮಾನತು ಮಾಡಿದ್ದಾರೆ.

Haveri VAO Exam Scam: Four Head Constables Suspended, Disciplinary Action Recommended Against CPI and PSIs
Google Lens ಬಳಸಿ ರಾಜ್ಯಕ್ಕೆ ಟಾಪರ್! VAO ಪರೀಕ್ಷೆಯಲ್ಲಿ 151 ಮಾರ್ಕ್ಸ್ ಪಡೆದಿದ್ದ ಶಂಕರ ಬನ್ನೂರ ಕಳ್ಳಾಟ ಬಯಲು; ಪೊಲೀಸ್ ವಶಕ್ಕೆ

ಮುಂದುವರೆದು, ಪರೀಕ್ಷಾ ಭದ್ರತೆಯ ಮೇಲ್ವಿಚಾರಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಓರ್ವ ವೃತ್ತ ನಿರೀಕ್ಷಕರು ಹಾಗೂ ಇಬ್ಬರು ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ, ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮಾಕಾಂತ್ ಭಟ್, ಕೊಠಡಿ ಮೇಲ್ವಿಚಾರಕ ಬಸವರಾಜ ಸವದಿ, ಡ್ರೆಸ್‌ಕೋಡ್ ಅಧಿಕಾರಿ ರಾಜು ದುಂಡಪ್ಪನವರ ಮತ್ತು ಪರೀಕ್ಷಾ ವೀಕ್ಷಕ ಶಿವಣ್ಣ ಸೇರಿದಂತೆ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಅಮಾನತಿಗೂ ಶಿಫಾರಸು ಪತ್ರ ಕಳುಹಿಸಲಾಗಿದೆ.

ಏತನ್ಮಧ್ಯೆ, ಆರೋಪಿ ಶಂಕರ್ ಬನ್ನೂರು ಪರೀಕ್ಷಾ ಕೇಂದ್ರಕ್ಕೇ ಬಂದಿರಲಿಲ್ಲ ಎಂಬ ಮತ್ತೊಬ್ಬ ಅಭ್ಯರ್ಥಿ ಸತೀಶ್ ಲಮಾಣಿ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ್ ಸ್ಪಷ್ಟನೆ ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಸಹಿಗಳನ್ನು ಪರಿಶೀಲಿಸಿ ಆತ ಪರೀಕ್ಷೆ ಬರೆದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದ್ದು, ಸುಳ್ಳು ಆರೋಪ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ, ಈ ಸಂಬಂಧ ಸತೀಶ್ ಲಮಾಣಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ.

Haveri VAO Exam Scam: Four Head Constables Suspended, Disciplinary Action Recommended Against CPI and PSIs
ಪಿಯುಸಿಗೆ 13 ವರ್ಷ, ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ 25 ಅಂಕ: ಆದ್ರೆ, VAO ಪರೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್! 151 ಅಂಕ ಗಳಿಸಿದ ಅಭ್ಯರ್ಥಿ ವಿರುದ್ಧ ತನಿಖೆಗೆ ಆದೇಶಿಸಿದ KEA

ಏನಿದು ಪ್ರಕರಣ?

ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಶಂಕರ ಬನ್ನೂರು ಎಂಬ ಅಭ್ಯರ್ಥಿ ಅಕ್ಟೋಬರ್ 4, 2026ರಂದು ನಡೆದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ 200ಕ್ಕೆ 151.25 ಅಂಕಗಳನ್ನು (75.5%) ಗಳಿಸಿ ಪ್ರಥಮ ಸ್ಥಾನ (ಟಾಪರ್) ಪಡೆದಿದ್ದರು. ಆದರೆ, ಅದಕ್ಕೂ 20 ದಿನಗಳ ಮುನ್ನ ನಡೆದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಶಂಕರ ಬನ್ನೂರು 100ಕ್ಕೆ ಕೇವಲ 25 ಅಂಕಗಳನ್ನು ಪಡೆದಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರ ನಂತರ ವಿಚಾರಣೆ ನಡೆದಾಗ, ಆತ ಪರೀಕ್ಷಾ ಕೇಂದ್ರದೊಳಗೆ ಹೋಗುವಾಗ ತನ್ನ ಮೊಬೈಲ್ ಫೋನನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗಿದ್ದನು. ಜೊತೆಗೆ, ಕೊನೆಯ ಸಾಲಿನಲ್ಲಿ ತನಗೆ ನಿಗದಿಯಾಗಿದ್ದ ಸೀಟಿನಲ್ಲಿ ಕುಳಿತು, ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಗೂಗಲ್ ಲೆನ್ಸ್ ಆ್ಯಪ್ ಬಳಸಿ ಉತ್ತರಗಳನ್ನು ಹುಡುಕಿ OMR ಶೀಟ್‌ನಲ್ಲಿ ಗುರುತು ಮಾಡಿದ್ದನು. ಈ ಸಂಪೂರ್ಣ ದೃಶ್ಯ ಪರೀಕ್ಷಾ ಕೊಠಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X