

ಬೆಂಗಳೂರು: ಕಾರು ಮಾರಾಟ ಮಾಡುವ ಮಧ್ಯವರ್ತಿಯೋರ್ವ ಕುಡಿದು ಕಾರು ಓಡಿಸಿ ಹೈಡ್ರಾಮಾ ಸೃಷ್ಟಿಸಿದ್ದು, ಇದನ್ನು ಟ್ರಾಫಿಕ್ PSI ಮೇಲೆ 'ಬ್ರೋಕರ್' ಹಲ್ಲೆ ಮಾಡಿ ಅವರ ಸಮವಸ್ತ್ರವನ್ನೇ ಹರಿದು ದರ್ಪ ತೋರಿದ್ದಾರೆ.
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಮನೆ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದ್ದಲ್ಲದೆ, ಪ್ರಶ್ನಿಸಲು ಬಂದ ಟ್ರಾಫಿಕ್ ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ಮೇಲೆಯೇ ಹಲ್ಲೆ ನಡೆಸಿ ಸಮವಸ್ತ್ರ ಹರಿದು ದರ್ಪ ತೋರಿದ ಕಾರು ಬ್ರೋಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪಿಎಸ್ಐ ಸಮವಸ್ತ್ರದಲ್ಲಿದ್ದ ಸ್ಟಾರ್ಗಳನ್ನು (ಶ್ರೇಣಿ ಚಿಹ್ನೆ) ಕಿತ್ತುಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡಿದ್ದಾನೆ. ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ ಮಹದೇಶ್ವರ ನಗರ ಮುಖ್ಯರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಸಮೀಪ ಈ ಘಟನೆ ನಡೆದಿದೆ.
ಬಂಧಿತನನ್ನು ಸಂಪಂಗಿರಾಮನಗರ ನಿವಾಸಿ ಸಚಿನ್ (35) ಎಂದು ಗುರುತಿಸಲಾಗಿದೆ. ಈತ ಕಾರು ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕಾಂಪೌಂಡ್ಗೆ ಕಾರು ಡಿಕ್ಕಿ
ಸಚಿನ್ ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗೋಡೆಯ ಒಂದು ಭಾಗ ಕುಸಿದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡ ಶಬ್ದ ಕೇಳಿ ಎಚ್ಚರಗೊಂಡ ಸ್ಥಳೀಯರು ಮನೆಗಳಿಂದ ಹೊರಬಂದಿದ್ದಾರೆ. ಈ ವೇಳೆ ಸಚಿನ್ ಅವರೊಂದಿಗೆ ಜಗಳಕ್ಕಿಳಿದಿದ್ದಾನೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಎದುರೇ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆತನ ವರ್ತನೆಯನ್ನು ಪ್ರಶ್ನಿಸಿದ ಸ್ಥಳೀಯರ ಪೈಕಿ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪಿಎಸ್ಐ ಮೇಲೆ ಹಲ್ಲೆ, ಸಮವಸ್ತ್ರ ಹರಿದು ಕಿರಿಕ್
ಘಟನೆ ಬಗ್ಗೆ ಮಾಹಿತಿ ತಿಳಿದು ಗಸ್ತಿನಲ್ಲಿದ್ದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸಚಿನ್ನನ್ನು ವಿಚಾರಿಸಿ ಮದ್ಯ ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಲು ಬ್ರೀತ್ ಅನಲೈಸರ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಆದರೆ, ಪರೀಕ್ಷೆಗೆ ನಿರಾಕರಿಸಿದ ಸಚಿನ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಪೊಲೀಸ್ ಠಾಣೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾನೆ.
ಈ ವೇಳೆ ಆತನನ್ನು ಹೊಯ್ಸಳ ಗಸ್ತು ವಾಹನಕ್ಕೆ ಕೂರಿಸಲು ಪೊಲೀಸರು ಮುಂದಾದಾಗ ಸಚಿನ್ ಪಿಎಸ್ಐ ಕೃಷ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಹರಿದು ಹಾಕಿದ್ದಾನೆ. ಮುಖಕ್ಕೂ ಗುದ್ದಿದ್ದಾನೆ. ಅಲ್ಲದೆ, ಸಮವಸ್ತ್ರದಲ್ಲಿದ್ದ ಸ್ಟಾರ್ಗಳನ್ನು ಕಿತ್ತು ಜೇಬಿನಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರು ದಾಖಲಿಸಿ ಬಂಧನ
ಈ ಸಂಬಂಧ ಪಿಎಸ್ಐ ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ಸಚಿನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.