ಪ್ರಧಾನಿ ಅಮುಲ್ ಹಾಲಿನ ಬೆಲೆ ಕಡಿಮೆ ಮಾಡಿದ್ರೆ, ನಾವೂ ಅದೇ ರೀತಿ ಮಾಡ್ತೀವಿ; ಶೋಭಾ ಕರಂದ್ಲಾಜೆಗೆ ಹಸುಗಳ ಸಗಣಿ, ಮೂತ್ರದ ವಾಸನೆಯ ಪರಿಚಯವಿದೆಯೇ? ಸಿಎಂ ಡಿಕೆಶಿ!

ರಾಜ್ಯ ಸಹಕಾರ ಮಹಾಮಂಡಳ ಇಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ-2026 ಅನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮುಲ್ ಹಾಲಿನ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
shobha, CM DKS
ಶೋಭಾ ಕರಂದ್ಲಾಜೆ, ಸಿಎಂ ಡಿಕೆ ಶಿವಕುಮಾರ್
Updated on: 

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಯ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದು, "ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ದರ ಸಿಗಲಿ ಎಂಬ ಉದ್ದೇಶದಿಂದಲೇ ಹಾಲಿನ ದರವನ್ನು ಹೆಚ್ಚಿಸಲಾಗಿದೆ" ಎಂದು ಹೇಳಿದ್ದಾರೆ.

ರಾಜ್ಯ ಸಹಕಾರ ಮಹಾಮಂಡಳ ಇಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ-2026 ಅನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮುಲ್ ಹಾಲಿನ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

"ಹಾಲು ಉತ್ಪಾದಕರಿಗೆ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ನ್ಯಾಯಯುತ ಬೆಲೆ ಸಿಗಬೇಕು. ಅಮುಲ್‌ಗೆ ಹಾಲು ಪೂರೈಸುವ ರೈತರಿಗೆ ಹೋಲಿಸಿದರೆ, ನಮ್ಮ ರೈತರಿಗೆ ಸಿಗುತ್ತಿರುವ ಹಣ ಕಡಿಮೆ. ಹಸುಗಳನ್ನು ಸಾಕುವುದು, ಅವುಗಳಿಗೆ ಮೇವು ನೀಡುವುದು ಮತ್ತು ಅವು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅವರು ತಮ್ಮ ಜಾನುವಾರುಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇಬೇಕು. ಅಮುಲ್ ತನ್ನ ರೈತರಿಗೆ ಪ್ರತಿ ಲೀಟರ್ ಹಾಲಿಗೆ 61-62 ರೂಪಾಯಿಗಳನ್ನು ನೀಡುತ್ತಿದ್ದರೆ, ನಮ್ಮ ರೈತರಿಗೆ 54 ರೂಪಾಯಿಗಳು ಸಿಗುತ್ತಿವೆ. ಪ್ರಧಾನಿಯವರು ಅಮುಲ್ ಹಾಲಿನ ದರವನ್ನು ಕಡಿಮೆ ಮಾಡಿದರೆ, ನಾವೂ ಕೂಡ ದರವನ್ನು ಕಡಿಮೆ ಮಾಡುತ್ತೇವೆ" ಎಂದು ಅವರು ಹೇಳಿದರು.

ಹೆಚ್ಚಿನ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದೆ ಎಂಬುದನ್ನು ಉಲ್ಲೇಖಿಸಿದ ಶಿವಕುಮಾರ್, ಹಾಲು ಉತ್ಪಾದಕರಿಗೆ ನ್ಯಾಯಯುತ ಪ್ರತಿಫಲ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಪುನರುಚ್ಚರಿಸಿದರು. "ರೈತರ ಕಠಿಣ ಪರಿಶ್ರಮವನ್ನು ಗುರುತಿಸಿ, ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು ನಮ್ಮ ಕರ್ತವ್ಯ" ಎಂದು ಹೇಳಿದರು.

ಶೋಭಾ ಕರಂದ್ಲಾಜೆಗೆ ಜಾನುವಾರುಗಳ ಸಗಣಿ, ಮೂತ್ರದ ವಾಸನೆಯ ಪರಿಚಯವಿದೆಯೇ?

ಹಾಲಿನ ದರ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಟೀಕಿಸಿದ ಮುಖ್ಯಮಂತ್ರಿ, "ಜಾನುವಾರುಗಳನ್ನು ಸಾಕುವಲ್ಲಿ ರೈತರು ಎದುರಿಸುವ ಕಷ್ಟಕಾರ್ಪಣ್ಯಗಳು ಅವರಿಗೆ ತಿಳಿದಿವೆಯೇ? ಅವರಿಗೆ ಸಗಣಿ ಮತ್ತು ಮೂತ್ರದ ವಾಸನೆ ಪರಿಚಯವಿದೆಯೇ?" ಎಂದು ಪ್ರಶ್ನಿಸಿದರು. ಕೃಷಿ ವಲಯದ 'ಬೆನ್ನೆಲುಬು' ಎಂದು ಬಣ್ಣಿಸಿದ ಸಹಕಾರ ಸಂಸ್ಥೆಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ ಎಂದು ಪುನರುಚ್ಚರಿಸಿದ ಶಿವಕುಮಾರ್, ಸಹಕಾರ ವಲಯವನ್ನು ಯಾರೂ ದುರ್ಬಲಗೊಳಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

shobha, CM DKS
ನಂದಿನಿ, ಮದರ್ ಡೈರಿ ಬೆನ್ನಲ್ಲೇ ಹಾಲಿನ ದರ ಹೆಚ್ಚಿಸಿದ ಅಮುಲ್: ಯಾವ ಹಾಲಿಗೆ ಎಷ್ಟು ಬೆಲೆ?

ರಾಜ್ಯಾದ್ಯಂತ ಸುಮಾರು 25 ಲಕ್ಷ ರೈತರು ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. "ರಾಜ್ಯದ ಬಹುದೊಡ್ಡ ಜನಸಂಖ್ಯೆಗೆ ಪೂರೈಸಲಾಗುವ ಹಾಲನ್ನು ಈ ಸಂಘಗಳಿಂದಲೇ ಸಂಗ್ರಹಿಸಲಾಗುತ್ತದೆ. ಸರ್ಕಾರವು ಹಾಲು ಉತ್ಪಾದಕರಿಗೆ ಪ್ರೋತ್ಸಾಹಕಗಳನ್ನೂ ನೀಡುತ್ತದೆ. ತರಕಾರಿ ಮಾರುಕಟ್ಟೆಗಳಲ್ಲಿ ಬೆಲೆಗಳನ್ನು ನಿಯಂತ್ರಿಸುವಲ್ಲಿ, ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸುವಲ್ಲಿ ಮತ್ತು ಕಬ್ಬಿಗೆ ಮಾರುಕಟ್ಟೆಯನ್ನು ಸೃಷ್ಟಿಸುವಲ್ಲಿ ಸಹಕಾರಿ ವಲಯವು ಪ್ರಮುಖ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಜನರು ಎಷ್ಟೇ ಸುಳ್ಳುಗಳನ್ನು ಹರಡಲಿ ಅಥವಾ ಎಂತಹ ರಾಜಕೀಯ ತಂತ್ರಗಳನ್ನು ಅನುಸರಿಸಲಿ, 2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಯೇ ಇರುತ್ತದೆ" ಎಂದು ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X