ರಾಮನಗರ: ಟ್ರಕ್ಕಿಂಗ್‌ಗೆ ಬಂದು ಬೆಟ್ಟದಲ್ಲಿ ದಾರಿ ತಪ್ಪಿದ ಒಡಿಶಾ ಮೂಲದ ಯುವಕನ ರಕ್ಷಣೆ

ಸಮುದ್ರ ಮಟ್ಟದಿಂದ 913 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಕಡಿದಾದ ಇಳಿಜಾರುಗಳನ್ನು ಹೊಂದಿದೆ. ಬೆಟ್ಟದಿಂದ ಕೆಳಗಿಳಿಯುವಾಗ ತೊಂದರೆಗೆ ಸಿಲುಕಿದ ಬಿಸ್ವಜಿತ್ ನಾಥ್, ದಟ್ಟವಾದ ಪ್ರದೇಶವೊಂದರಲ್ಲಿ ಸಿಲುಕಿಕೊಂಡರು.
ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ
ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ
Updated on: 

ರಾಮನಗರ: ತಾಲೂಕಿನ ಹುಣಸನಹಳ್ಳಿ ಬಳಿಯ ಮುತ್ತುರಾಯಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿ ಸಿಲುಕಿಕೊಂಡಿದ್ದ ಚಾರಣಿಗನೊಬ್ಬನನ್ನು, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.

ಒಡಿಶಾ ಮೂಲದವರಾದ ಮತ್ತು ವರ್ತೂರಿನಲ್ಲಿ ವಾಸಿಸುವ ಹೋಟೆಲ್ ಮ್ಯಾನೇಜರ್ ಬಿಸ್ವಜಿತ್ ನಾಥ್ (24), ಯೂಟ್ಯೂಬರ್ ಆಗಿರುವುದಲ್ಲದೆ, ಚಾರಣದ (trekking) ಬಗ್ಗೆಯೂ ಅಪಾರ ಆಸಕ್ತಿ ಹೊಂದಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಅಗ್ನಿಶಾಮಕ ಇಲಾಖೆಯ ಪ್ರಕಾರ, ಮಧ್ಯಾಹ್ನ 12.45ರ ಸುಮಾರಿಗೆ ಬೆಟ್ಟವೊಂದರಲ್ಲಿ ಚಾರಣಿಗನೊಬ್ಬ ಸಿಲುಕಿಕೊಂಡಿರುವ ಬಗ್ಗೆ ಅವರಿಗೆ ಕರೆ ಬಂದಿತ್ತು.

ಸಮುದ್ರ ಮಟ್ಟದಿಂದ 913 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಕಡಿದಾದ ಇಳಿಜಾರುಗಳನ್ನು ಹೊಂದಿದೆ. ಬೆಟ್ಟದಿಂದ ಕೆಳಗಿಳಿಯುವಾಗ ತೊಂದರೆಗೆ ಸಿಲುಕಿದ ಬಿಸ್ವಜಿತ್ ನಾಥ್, ದಟ್ಟವಾದ ಪ್ರದೇಶವೊಂದರಲ್ಲಿ ಸಿಲುಕಿಕೊಂಡರು. ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ್ದ ಬಿಸ್ವಾಜಿತ್, ಬೆಟ್ಟದ ಮಧ್ಯೆ ಸಿಲುಕಿಕೊಂಡು ಏನು ಮಾಡಬೇಕೆಂದು ತೋಚದೆ ಆತಂಕಗೊಂಡಿದ್ದರು.

ತಾವು ಬಂದ ದಾರಿ ಯಾವುದು, ಕೆಳಗೆ ಇಳಿಯುವುದು ಹೇಗೆ ಎಂಬುದು ತಿಳಿಯದೆ ಪರದಾಡಿದ್ದಾರೆ. ನಂತರ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ತಾವು ಬೆಟ್ಟದಲ್ಲಿ ದಾರಿ ತಪ್ಪಿ ಸಿಲುಕಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಟ್ಟದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ
Himalayan trekking tragedy: ತಮಿಳುನಾಡು ಟ್ರೆಕ್ಕಿಂಗ್'ಗೂ ಯೋಜನೆ ರೂಪಿಸಿದ್ದ ಮೃತ ಚಾರಣಿಗ ಪ್ರಸಾದ್!

ಯುವಕನಿಂದ ಕರೆ ಬಂದ ತಕ್ಷಣ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕೂಡಲೇ ಬೆಟ್ಟದ ತಪ್ಪಲಿಗೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು, ಯುವಕನನ್ನು ಪತ್ತೆಹಚ್ಚಲು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವು ಕೋರಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ಮೋಹನ್ ಮುಡಿಗಾವಡ್ ಹಾಗೂ ಸಿಬ್ಬಂದಿಗಳಾದ ಅಶೋಕ್ ವಡೇರ್, ಸಂತೋಷ್ ಪಾಟೀಲ್, ಶಿವಲಿಂಗ ಬಿದರಾವಳಿ ಮತ್ತು ಇತರರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಬೆಟ್ಟದ ಅರಣ್ಯ ಪ್ರದೇಶದಲ್ಲಿ ಯುವಕನ ಇರುವಿಕೆಯನ್ನು ಪತ್ತೆಹಚ್ಚಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬಿಸ್ವಾಜಿತ್ ಇರುವ ಸ್ಥಳವನ್ನು ಗುರುತಿಸಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಧೈರ್ಯ ತುಂಬಿದ್ದಾರೆ. ಸುಮಾರು ಒಂದು ಗಂಟೆ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಯುವಕನನ್ನು ಪತ್ತೆಹಚ್ಚುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಾಥ್, ತಾವು ಬೆಳಿಗ್ಗೆ 8 ಗಂಟೆ ಸುಮಾರಿಗೆ ಚಾರಣವನ್ನು ಪ್ರಾರಂಭಿಸಿ, 2.5 ಕಿ.ಮೀ ಕ್ರಮಿಸಿ ಬೆಟ್ಟದ ತುದಿಯನ್ನು ತಲುಪಿದ್ದಾಗಿ ತಿಳಿಸಿದರು. ಆದರೆ, ಹಿಂತಿರುಗುವಾಗ ದಾರಿ ತಪ್ಪಿ ಬೇರೆ ಮಾರ್ಗದಲ್ಲಿ ಸಾಗಿದ್ದರು.

"ನಾನು ಅಂತಹ ಜಾಗದಲ್ಲಿ ಸಿಲುಕಿಕೊಂಡಿದ್ದೆ, ಅಲ್ಲಿಂದ ಮೇಲೆ ಏರಲೂ ಆಗುತ್ತಿರಲಿಲ್ಲ ಅಥವಾ ಕೆಳಗೂ ಇಳಿಯಲು ಸಾಧ್ಯವಾಗುತ್ತಿರಲಿಲ್ಲ. ನಂತರ, ನಾನು 'ನಮ್ಮ 112' ಸಂಖ್ಯೆಗೆ ಕರೆ ಮಾಡಿದೆ. ಅಗ್ನಿಶಾಮಕ ಇಲಾಖೆ, ರಾಮನಗರ ಗ್ರಾಮಾಂತರ ಪೊಲೀಸರು ಮತ್ತು ಸ್ಥಳೀಯರು ನನ್ನನ್ನು ರಕ್ಷಿಸಲು ಸಹಾಯ ಮಾಡಿದರು. ನನ್ನ ಪ್ರಾಣ ಉಳಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X