

ಮಂಗಳೂರು/ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಸಂಜೆ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟೇಕ್‌ಆಫ್(ಹಾರಾಟ ಆರಂಭಿಸುವ ಪ್ರಕ್ರಿಯೆ) ಅನ್ನು ರದ್ದುಗೊಳಿಸಿದೆ.
ವಿಮಾನವು ವಾಪಸ್ ನಿಲುಗಡೆ ತಾಣಕ್ಕೆ(ಬೇ) ಮರಳಿದ್ದು, ತಾಂತ್ರಿಕ ತಪಾಸಣೆಗಾಗಿ ಅದನ್ನು 'ಏರ್‌ಕ್ರಾಫ್ಟ್ ಆನ್ ಗ್ರೌಂಡ್' (AOG - ಹಾರಾಟಕ್ಕೆ ಅಯೋಗ್ಯ ಸ್ಥಿತಿ) ಎಂದು ಘೋಷಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ಮಂಗಳವಾರ ತಿಳಿಸಿವೆ.
ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲು ಸೇರಿದಂತೆ ವಿಮಾನದಲ್ಲಿದ್ದ 229 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿದಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, 229 ಪ್ರಯಾಣಿಕರ ಪೈಕಿ ಕೇವಲ 34 ಮಂದಿ ಮಾತ್ರ ಈ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ವಿಮಾನವು ಮಂಗಳವಾರ ಮಧ್ಯರಾತ್ರಿ 12.10ಕ್ಕೆ ಮಂಗಳೂರಿನಿಂದ ಹೊರಟಿತು.
ಇಂಡಿಗೋ ವಕ್ತಾರರ ಪ್ರಕಾರ, ನವೆಂಬರ್ 16ರಂದು 6E 388 ವಿಮಾನವು ಟೇಕ್‌ಆಫ್ ಆಗುವ ಸ್ವಲ್ಪ ಸಮಯದ ಮೊದಲು ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ವಿಮಾನವು ಆಗಸಕ್ಕೆ ಹಾರಿರಲಿಲ್ಲ
ವಿಮಾನ ಟೇಕ್‌ಆಫ್ ಆಗುವ ಸಂದರ್ಭದಲ್ಲಿ ವಿಮಾನದ ಕೆಳಭಾಗದಲ್ಲಿ ಕಿಡಿಗಳು ಕಾಣಿಸಿಕೊಂಡಿದ್ದು, ಒಂದು ಟೈರ್ ಸ್ಫೋಟಗೊಂಡಿತ್ತು ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಇದರಿಂದ ಎಚ್ಚೆತ್ತ ಪೈಲಟ್, ತಕ್ಷಣವೇ ಬ್ರೇಕ್ ಹಾಕಿ ರನ್‌ವೇ ಮೇಲೆಯೇ ವಿಮಾನವನ್ನು ನಿಲ್ಲಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣವು ಅತ್ಯಂತ ಸೂಕ್ಷ್ಮವಾದ 'ಟೇಬಲ್‌ಟಾಪ್ ರನ್‌ವೇ' ಹೊಂದಿರುವುದರಿಂದ, ತುರ್ತು ಬ್ರೇಕ್ ಹಾಕಿದರೂ ವಿಮಾನವು ವೇಗದ ಕಾರಣದಿಂದ ಸ್ವಲ್ಪ ದೂರ ಮುಂದಕ್ಕೆ ಚಲಿಸಿದೆ. ಅಂತಿಮವಾಗಿ ರನ್‌ವೇಯ ತುದಿಯಲ್ಲಿ ವಿಮಾನವು ಸುರಕ್ಷಿತವಾಗಿ ನಿಂತಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ವಿಮಾನವು ಇನ್ನೂ ನೆಲದ ಮೇಲೆಯೇ ಇತ್ತು, ಗಾಳಿಯಲ್ಲಿ ಹಾರಾಟ ಆರಂಭಿಸಿರಲಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.