

ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ತಲೆತಲಾಂತರದಿಂದ ದೇವರ ಸೇವೆ ಮಾಡುತ್ತಿರುವ ಸಾವಿರಾರು ಅರ್ಚಕರು ಸೂಕ್ತ ವೇತನ ಮತ್ತು ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಹೆಚ್ಚಳ, ಆರೋಗ್ಯ ವಿಮೆ, ಇಎಸ್‌ಐ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವಂತೆ ಅರ್ಚಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಬರಹವಿದೆ. ಆದರೆ ದೇವಾಲಯಗಳಲ್ಲಿ ದೇವರ ಸೇವೆ ಮಾಡುವ ಅರ್ಚಕರೇ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 34,563 ದೇವಾಲಯಗಳಿವೆ. ಇವುಗಳಲ್ಲಿ 205 ದೇವಾಲಯಗಳು ಎ ವರ್ಗ, 306 ದೇವಾಲಯಗಳು ಬಿ ವರ್ಗಕ್ಕೆ ಸೇರಿದ್ದು, ಉಳಿದವು ಸಿ ವರ್ಗದಲ್ಲಿವೆ. ದೇವಾಲಯಗಳ ವಾರ್ಷಿಕ ಆದಾಯದ ಆಧಾರದ ಮೇಲೆ ಈ ವರ್ಗೀಕರಣ ಮಾಡಲಾಗಿದೆ.
ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳು ಎ ವರ್ಗಕ್ಕೆ, 5 ಲಕ್ಷದಿಂದ 25 ಲಕ್ಷ ರೂ.ವರೆಗೆ ಆದಾಯ ಹೊಂದಿರುವವು ಬಿ ವರ್ಗಕ್ಕೆ ಹಾಗೂ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವು ಸಿ ವರ್ಗಕ್ಕೆ ಸೇರುತ್ತವೆ. ಈ ದೇವಾಲಯಗಳಲ್ಲಿ ಸುಮಾರು 48 ಸಾವಿರ ಅರ್ಚಕರು ಕಾರ್ಯನಿರ್ವಹಿಸುತ್ತಿದ್ದಾರೆ.
ತಲೆತಲಾಂತರದಿಂದ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಮಾಸಿಕ 3 ಸಾವಿರ ರೂ.ನಿಂದ 27 ಸಾವಿರ ರೂ.ವರೆಗೆ ವೇತನ ಸಿಗುತ್ತಿದೆ. 2012ರಲ್ಲಿ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ನೇಮಕಗೊಂಡ ಅರ್ಚಕರಿಗೆ ತಿಂಗಳಿಗೆ 12 ಸಾವಿರ ರೂ ವೇತನ ನೀಡಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಕೆಲವು ದೇವಾಲಯಗಳು ಕರ್ನಾಟಕದಲ್ಲಿವೆ. ಆದರೆ, ಈ ದೇವಾಲಯಗಳಲ್ಲಿ ಪ್ರತಿನಿತ್ಯ ಪೂಜೆ ಸಲ್ಲಿಸುವ ಅರ್ಚಕರಿಗೆ ಮಾತ್ರ ಸಂಸ್ಥೆಗಳ ಆದಾಯಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ ಎಂಬ ಅಸಮಾಧಾನವಿದೆ.
ಎರಡು ತಿಂಗಳಿಗೊಮ್ಮೆ ₹8,600 ವೇತನ!
ರಾಜ್ಯದ ಪ್ರಮುಖ ದೇವಾಲಯವೊಂದರಲ್ಲಿ ಕೆಲಸ ಮಾಡುತ್ತಿರುವ ರಘುವೀರ (ಹೆಸರು ಬದಲಿಸಲಾಗಿದೆ) ಎಂಬ ಅರ್ಚಕರು ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
"ನನಗೆ ಎರಡು ತಿಂಗಳಿಗೊಮ್ಮೆ ಕೇವಲ 8,600 ರೂ. ವೇತನ ಸಿಗುತ್ತದೆ. ಆರೋಗ್ಯ ವಿಮೆ, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ವಿಮೆಯ ಪ್ರೀಮಿಯಂ ಅನ್ನು ನಮ್ಮ ವೇತನದಿಂದಲೇ ಕಡಿತಗೊಳಿಸುವುದಾಗಿ ಹೇಳಿದಾಗ ನಾವು ಒಪ್ಪಲಿಲ್ಲ. ಕನಿಷ್ಠ ಸರ್ಕಾರ ನಮ್ಮ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡರೂ ಅವರ ಭವಿಷ್ಯಕ್ಕೆ ನೆರವಾಗುತ್ತದೆ" ಎಂದು ಅವರು ಹೇಳಿದ್ದಾರೆ.
ತಲೆತಲಾಂತರದಿಂದ ಅರ್ಚಕ ವೃತ್ತಿಯಲ್ಲಿರುವ ಹಲವು ಕುಟುಂಬಗಳು ದೇವಾಲಯಕ್ಕೆ ಹೊಂದಿಕೊಂಡಿರುವ ಮನೆಗಳಲ್ಲಿ ವಾಸಿಸುತ್ತಿವೆ. ಆದರೆ, ಆ ಮನೆಗಳು ಅವರ ಹೆಸರಿನಲ್ಲಿ ಇಲ್ಲದ ಕಾರಣ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಯನ್ನೂ ಅರ್ಚಕರೇ ಮಾಡಿಸಿಕೊಳ್ಳಬೇಕಾಗಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದರಿಂದ ಅರ್ಚಕರ ಆದಾಯದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಮತ್ತೊಬ್ಬ ಅರ್ಚಕರು ಬೇಸರ ವ್ಯಕ್ತಪಡಿಸಿದ್ದಾರೆ. "ದೇವಾಲಯದ ಹುಂಡಿಗಳು ತುಂಬುತ್ತಿವೆ. ಆದರೆ ನಮ್ಮ ಹೊಟ್ಟೆ ಮಾತ್ರ ತುಂಬುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ಪೂಜಾ ಸಾಮಗ್ರಿಗಳ ಖರ್ಚಿಗೆ ತಕ್ಕಂತೆ ಶುಲ್ಕವಿಲ್ಲ
ದೇವಾಲಯಗಳಲ್ಲಿ ನಡೆಯುವ ವಿವಿಧ ಸೇವೆಗಳಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕ, ಪೂಜೆಗೆ ಬೇಕಾಗುವ ಸಾಮಗ್ರಿಗಳ ವೆಚ್ಚವನ್ನೂ ಭರಿಸುತ್ತಿಲ್ಲ ಎಂಬುದು ಅರ್ಚಕರ ಮತ್ತೊಂದು ಅಳಲು. ಪಂಚಾಮೃತ ಅಭಿಷೇಕಕ್ಕೆ ಭಕ್ತರಿಂದ 650 ರೂ. ಶುಲ್ಕ ಪಡೆಯಲಾಗುತ್ತದೆ. ಆದರೆ, ಅರ್ಚಕರಿಗೆ ಸಿಗುವುದು ಕೇವಲ 520 ರೂ. ಉಳಿದ ಹಣ ಸರ್ಕಾರಕ್ಕೆ ಹೋಗುತ್ತದೆ.
ಈ ಪೂಜೆಗೆ ಹಾಲು, ಮೊಸರು, ಜೇನುತುಪ್ಪ ಮತ್ತು ತುಪ್ಪ ಖರೀದಿಸಬೇಕು. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಹಲವು ದೇವಾಲಯಗಳಲ್ಲಿ ದೊಡ್ಡ ವಿಗ್ರಹಗಳಿದ್ದು, ಅಭಿಷೇಕಕ್ಕೆ ಕನಿಷ್ಠ 8ರಿಂದ 10 ಲೀಟರ್ ಹಾಲು ಅಥವಾ ಮೊಸರು ಬೇಕಾಗುತ್ತದೆ. ನಿಗದಿಪಡಿಸಿರುವ ಹಣದಲ್ಲಿ ಇಷ್ಟೊಂದು ಪ್ರಮಾಣದ ಸಾಮಗ್ರಿಗಳನ್ನು ಖರೀದಿಸುವುದು ಹೇಗೆ ಎಂದು ಅರ್ಚಕರು ಪ್ರಶ್ನಿಸಿದ್ದಾರೆ.
ಅದೇ ರೀತಿ, ಪುಳಿಯೋಗರೆ ಪ್ರಸಾದಕ್ಕೆ ಭಕ್ತರಿಂದ 350 ರೂ. ಪಡೆಯಲಾಗುತ್ತದೆ. ಆದರೆ ದೇವಾಲಯಕ್ಕೆ ಸಿಗುವುದು 210 ರೂ. ಮಾತ್ರ. ಒಂದು ಕೆ.ಜಿ. ಅಕ್ಕಿಯ ಬೆಲೆ 82 ರೂ.ಗೆ ಏರಿಕೆಯಾಗಿರುವುದರಿಂದ ಪ್ರಸಾದ ತಯಾರಿಕೆಯ ವೆಚ್ಚವೂ ಹೆಚ್ಚಾಗಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.
ತಸ್ತೀಕ್ ಮೊತ್ತ ಹೆಚ್ಚಳಕ್ಕೆ ಆಗ್ರಹ
ಕರ್ನಾಟಕ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಮಾತನಾಡಿ, ಹಿಂದೆ ಮಹಾರಾಜರು ದೇವಾಲಯಗಳಿಗೆ ನೀಡಿದ್ದ ಇನಾಂ ಭೂಮಿಯಿಂದ ಅರ್ಚಕರ ಕುಟುಂಬಗಳಿಗೆ ಆದಾಯ ಬರುತ್ತಿತ್ತು. ಆದರೆ ಇನಾಂ ಪದ್ಧತಿ ರದ್ದಾದ ಬಳಿಕ ಅರ್ಚಕರು ಭೂಮಿ ಮತ್ತು ಸಾಂಪ್ರದಾಯಿಕ ಆದಾಯದ ಮೂಲಗಳನ್ನು ಕಳೆದುಕೊಂಡರು ಎಂದು ಹೇಳಿದ್ದಾರೆ.
ಅರ್ಚಕರ ನಿರಂತರ ಪ್ರಯತ್ನದ ಬಳಿಕ 1982ರಲ್ಲಿ ಸರ್ಕಾರ 'ತಸ್ತೀಕ್' ವ್ಯವಸ್ಥೆಯನ್ನು ಜಾರಿಗೆ ತಂದಿತು. ಪೂಜೆಗೆ ಅಗತ್ಯವಿರುವ ಸಾಮಗ್ರಿಗಳ ವೆಚ್ಚ ಭರಿಸಲು ಅರ್ಚಕರಿಗೆ ನಿಗದಿತ ಮೊತ್ತ ನೀಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. 1982ರಲ್ಲಿ ವರ್ಷಕ್ಕೆ 200ರಿಂದ 500 ರೂ. ಇದ್ದ ತಸ್ತೀಕ್ ಮೊತ್ತ ಈಗ ವಾರ್ಷಿಕ 72 ಸಾವಿರ ರೂ.ಗೆ ಏರಿಕೆಯಾಗಿದೆ. ಅಂದರೆ ತಿಂಗಳಿಗೆ 6 ಸಾವಿರ ರೂ. ಸಿಗುತ್ತದೆ. ಆದರೆ ಹಾಲು, ಮೊಸರು, ಅಕ್ಕಿ, ಬೇಳೆ, ಹೂವು, ತುಪ್ಪ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿರುವುದರಿಂದ ಈ ಮೊತ್ತ ಸಾಕಾಗುತ್ತಿಲ್ಲ.
"ನಾವು ತಲೆತಲಾಂತರದಿಂದ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಹೀಗಾಗಿ ಸೇವೆಯನ್ನು ಅರ್ಧಕ್ಕೆ ಬಿಟ್ಟು ಹೋಗಲು ಸಾಧ್ಯವಿಲ್ಲ" ಎಂದು ಶ್ರೀವತ್ಸ ಹೇಳಿದ್ದಾರೆ. ಅರ್ಚಕರಿಗೆ ಗೌರವಯುತ ವೇತನ, ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕೆ ನೆರವು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.