

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, "ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡಲು ಮುಕ್ತ ಪರವಾನಗಿ (Free Licence) ಸಿಕ್ಕಿದೆ ಎಂದು ಭಾವಿಸಬಾರದು" ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಏಪ್ರಿಲ್ 24, 2025 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ತನುಷ್ ಎಂ. ಶೆಟ್ಟಿ (24 ವರ್ಷ) ಎಂಬುವವರು ನೀಡಿದ ದೂರುಗಳ ಆಧಾರದ ಮೇಲೆ ಶುಭಾ ಮತ್ತು ಮೋಹನ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ಅದರಲ್ಲಿ, ದೂರುದಾರರು ಆಸ್ಪತ್ರೆಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಬಳಸಿಕೊಂಡು ಅಸಭ್ಯ ಮತ್ತು ಬೆದರಿಕೆಯ ಸಂದೇಶಗಳನ್ನು ಹಾಕಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಮಾರ್ಫ್ ಮಾಡಿದ (ತಿರುಚಿದ) ಫೋಟೋಗಳನ್ನು ಹಂಚಿಕೊಂಡು, ದೂರುದಾರರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಎಂದು ಸುಳ್ಳು ಪ್ರಚಾರ ಮಾಡಿ ಕೋಮು ದ್ವೇಷ ಹರಡಲು ಯತ್ನಿಸಲಾಗಿದೆ; ಜೊತೆಗೆ ದೂರುದಾರರು ಅತ್ಯಾಚಾರ, ಬಲವಂತದ ಗರ್ಭಪಾತ, ಪೋಕ್ಸೋ ಅಪರಾಧ, ಹಿಂದೂ ದೇವಾಲಯಗಳಿಗೆ ಅವಮಾನ ಮತ್ತು ಸೌಜನ್ಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳ್ಳು ಹಾಗೂ ಮಾನಹಾನಿಕರ ಪೋಸ್ಟ್ಗಳನ್ನು ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬೆನ್ನಲ್ಲೇ, ಆರೋಪಿಗಳು ತಮ್ಮ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ಮತ್ತು 62ರ ಅಡಿಯಲ್ಲಿ ದಾಖಲಾಗಿರುವ ಎರಡು ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೇಟ್ಟಿಲೇರಿದ್ದರು.
ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, "ಮೇಲ್ನೋಟಕ್ಕೆ ದೂರುದಾರರ ಆರೋಪಗಳು ಸುಳ್ಳಲ್ಲ ಎಂಬುದು ಕಂಡುಬರುತ್ತಿದೆ. ಈ ಹಿಂದೆ ನ್ಯಾಯಾಲಯ ನೀಡಿದ್ದ ಮಧ್ಯಂತರ ತಡೆಯಾಜ್ಞೆಯಿಂದಾಗಿ ಪೊಲೀಸ್ ತನಿಖೆ ಸ್ಥಗಿತಗೊಂಡಿತ್ತು. ಆರೋಪಗಳು ಗಂಭೀರವಾಗಿದ್ದು, ಅವುಗಳ ಸತ್ಯಾಸತ್ಯತೆ ತಿಳಿಯಲು ತನಿಖೆಯ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ಜೊತೆಗೆ, "ಸಾಮಾಜಿಕ ಜಾಲತಾಣದಲ್ಲಿ ಖಾತೆ ಇದೆ ಎಂಬ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡಲು ಅದೊಂದು ಮುಕ್ತ ಪರವಾನಗಿ (Free Licence) ಅಲ್ಲ. ವಾಕ್ ಸ್ವಾತಂತ್ರ್ಯಕ್ಕೆ ಸಂವಿಧಾನದ ಮಿತಿಗಳಿವೆ" ಎಂದು ಸ್ಪಷ್ಟಪಡಿಸಿದರು.