ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲು ಕಡಲೆಕಾಯಿ ಪರಿಷೆ ಸಜ್ಜು; 4 ಲಕ್ಷ ಕಾಗದದ ಚೀಲ ವಿತರಣೆಗೆ ಗುರಿ..!

ಹಳೆಯ ದಿನಪತ್ರಿಕೆಗಳನ್ನು ಸಂಗ್ರಹಿಸಿ ಅವುಗಳಿಂದ ಕಾಗದದ ಚೀಲಗಳನ್ನು ತಯಾರಿಸಿ ವ್ಯಾಪಾರಿಗಳಿಗೆ ವಿತರಿಸುವುದರ ಜೊತೆಗೆ, ಈ ವರ್ಷ ಆನ್‌ಲೈನ್ ವಸ್ತುಗಳು, ದಿನಸಿ ಮತ್ತು ಆಹಾರ ವಿತರಣೆಯಿಂದ ಮನೆಗಳಲ್ಲಿ ಉಳಿದಿರುವ ಬಳಕೆಯಾಗದ ಕಾಗದದ ಚೀಲಗಳನ್ನು ಸಂಗ್ರಹಿಸುವ ಅಭಿಯಾನವನ್ನೂ ಒಕ್ಕೂಟ ಕೈಗೊಂಡಿದೆ.
File photo
ಕಡಲೆಕಾಯಿ ಪರಿಷೆ (ಫೋಟೋ ಕೃಪೆ: ಕೆಪಿಎನ್)
Updated on: 

ಬೆಂಗಳೂರು: ನಗರದ ಐತಿಹಾಸಿಕ ಮಲ್ಲೇಶ್ವರಂ ಮತ್ತು ಬಸವನಗುಡಿ ಕಡಲೆಕಾಯಿ ಪರಿಷೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳು ಮತ್ತು ನಾಗರಿಕ ಸಂಘಟನೆಗಳು ವಿನೂತನ ಹೆಜ್ಜೆಯಿಟ್ಟಿವೆ.

ಮನೆಗಳಲ್ಲಿ ವ್ಯರ್ಥವಾಗಿ ಸಂಗ್ರಹವಾಗುವ ಆನ್‌ಲೈನ್ ಡೆಲಿವರಿ ಪೇಪರ್ ಬ್ಯಾಗ್‌ಗಳಿಗೆ ಮರುಜೀವ ನೀಡುವ ಮೂಲಕ, ಪರಿಷೆಯ ವ್ಯಾಪಾರಿಗಳಿಗೆ ಉಚಿತವಾಗಿ ಪೇಪರ್ ಚೀಲಗಳನ್ನು ಪೂರೈಸಲು 'ಜೀರೋ ವೇಸ್ಟ್ ಕಲೆಕ್ಟಿವ್' (Zero Waste Collective) ತಂಡವು ಮುಂದಾಗಿದೆ.

ಹಳೆಯ ದಿನಪತ್ರಿಕೆಗಳನ್ನು ಸಂಗ್ರಹಿಸಿ ಅವುಗಳಿಂದ ಕಾಗದದ ಚೀಲಗಳನ್ನು ತಯಾರಿಸಿ ವ್ಯಾಪಾರಿಗಳಿಗೆ ವಿತರಿಸುವುದರ ಜೊತೆಗೆ, ಈ ವರ್ಷ ಆನ್‌ಲೈನ್ ವಸ್ತುಗಳು, ದಿನಸಿ ಮತ್ತು ಆಹಾರ ವಿತರಣೆಯಿಂದ ಮನೆಗಳಲ್ಲಿ ಉಳಿದಿರುವ ಬಳಕೆಯಾಗದ ಕಾಗದದ ಚೀಲಗಳನ್ನು ಸಂಗ್ರಹಿಸುವ ಅಭಿಯಾನವನ್ನೂ ಒಕ್ಕೂಟ ಕೈಗೊಂಡಿದೆ.

ಈ ಎರಡು ಉಪಕ್ರಮಗಳ ಮೂಲಕ ವ್ಯಾಪಾರಿಗಳಿಗೆ ಸುಮಾರು ನಾಲ್ಕು ಲಕ್ಷ ಕಾಗದದ ಚೀಲಗಳನ್ನು ಉಚಿತವಾಗಿ ವಿತರಿಸುವ ಗುರಿ ಹೊಂದಲಾಗಿದೆ.

2025ರಲ್ಲಿ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ 700 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 200 ಕೆ.ಜಿ. ಬಳಕೆಯಾಗದ ಪ್ಲಾಸ್ಟಿಕ್ ಕೂಡ ಸೇರಿತ್ತು ಎಂದು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.

ಪ್ರತಿ ವರ್ಷ ವಿತರಿಸುವ ಕಾಗದದ ಚೀಲಗಳ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ತಮ್ಮ ಉದ್ದೇಶವಲ್ಲ. ನಾಗರಿಕರು ಮತ್ತು ವ್ಯಾಪಾರಿಗಳಲ್ಲಿ ಕ್ರಮೇಣ ವರ್ತನೆಯ ಬದಲಾವಣೆ ತಂದು, ಜನರು ಮನೆಯಿಂದಲೇ ಚೀಲಗಳನ್ನು ತರುವ ಹಾಗೂ ಪರಿಸರಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಮುಖ್ಯ ಗುರಿಯಾಗಿದೆ ಎಂದು ಸದಸ್ಯರು ಹೇಳಿದ್ದಾರೆ.

ಪ್ರತಿ ವರ್ಷ ಜನರಲ್ಲಿ ಪರಿಸರ ಕಾಳಜಿ ಮತ್ತು ಮರುಬಳಕೆಯ ಕುರಿತು ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

File photo
ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ಫಿಕ್ಸ್!

ಶೂನ್ಯ ತ್ಯಾಜ್ಯ ಒಕ್ಕೂಟದ ಸಂಸ್ಥಾಪಕ ಧ್ರುವ್ ನಾಗರಾಜನ್ ಕೌಂಡಿನ್ಯ ಮಾತನಾಡಿ, “ಕಳೆದ ವರ್ಷ ಕಡಲೆಕಾಯಿ ಪರಿಷೆಗೆ 12 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದರು. ಈ ವೇಳೆ ಎರಡು ಲಕ್ಷಕ್ಕೂ ಹೆಚ್ಚು ಕಾಗದದ ಚೀಲಗಳನ್ನು ವಿತರಿಸಲಾಗಿತ್ತು. ಪರಿಷೆಯನ್ನು ಪರಿಸರಸ್ನೇಹಿಯಾಗಿ ರೂಪಿಸಲು ನಾಗರಿಕರು, ವ್ಯಾಪಾರಿಗಳು, ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳೆಲ್ಲರೂ ಒಟ್ಟಾಗಿ ಪಾಲ್ಗೊಳ್ಳಬೇಕು. 2026ರಲ್ಲಿ ಕೇವಲ ಚೀಲಗಳನ್ನು ವಿತರಿಸುವುದು ಮತ್ತು ತ್ಯಾಜ್ಯ ಸಂಗ್ರಹಿಸುವುದನ್ನು ಮೀರಿ, ಜನರ ವರ್ತನೆಯಲ್ಲಿ ಶಾಶ್ವತ ಬದಲಾವಣೆ ತರುವುದು ಹಾಗೂ ಉತ್ತಮ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ರೂಪಿಸುವುದು ನಮ್ಮ ಗುರಿಯಾಗಿದೆ ಎಂದರು.

ನಗರದಾದ್ಯಂತ 20ಕ್ಕೂ ಹೆಚ್ಚು ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್ ವಸ್ತುಗಳ ವಿತರಣೆಯಿಂದ ಉಳಿದಿರುವ ಸ್ವಚ್ಛ, ಬಳಕೆಯಾಗದ ಕಾಗದದ ಚೀಲಗಳು ಮತ್ತು ಹಳೆಯ ದಿನಪತ್ರಿಕೆಗಳನ್ನು ಈ ಕೇಂದ್ರಗಳಲ್ಲಿ ನೀಡಬಹುದು ಎಂದು ತಿಳಿಸಿದ್ದಾರೆ.

ಒಕ್ಕೂಟದ ಸದಸ್ಯ ಕ್ಷಿತಿಜ್ ಬಾಗ್ರೋಡಿಯಾ ಮಾತನಾಡಿ, ಕಡಲೆಕಾಯಿ ಪರಿಷೆಯನ್ನು ಪರಿಸರಸ್ನೇಹಿಯಾಗಿ ರೂಪಿಸುವಲ್ಲಿ ಶಾಲೆಗಳು, ಕಾಲೇಜುಗಳು, ಕಂಪನಿಗಳು ಮತ್ತು ಅಪಾರ್ಟ್‌ಮೆಂಟ್ ಸಮುದಾಯಗಳು ಮಹತ್ವದ ಪಾತ್ರ ವಹಿಸಬಹುದು. ದಿನಪತ್ರಿಕೆ ಸಂಗ್ರಹಿಸುವ ಮತ್ತು ಕಾಗದದ ಚೀಲ ತಯಾರಿಸುವ ಅಭಿಯಾನಗಳನ್ನು ಆಯೋಜಿಸಬಹುದು. ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ಇದರಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬಹುದು. ಅಲ್ಲದೆ, ದಿನಸಿ ಮತ್ತು ಆಹಾರ ವಿತರಣೆಯಿಂದ ಉಳಿದಿರುವ ಸ್ವಚ್ಛ, ಬಳಕೆಯಾಗದ ಕಂದು ಬಣ್ಣದ ಕಾಗದದ ಚೀಲಗಳನ್ನು ಸಂಗ್ರಹಿಸಿ ವ್ಯಾಪಾರಿಗಳ ಮರುಬಳಕೆಗೆ ನೀಡಬಹುದು ಎಂದು ಹೇಳಿದ್ದಾರೆ.

ಒಕ್ಕೂಟದ ಸದಸ್ಯ ಹಾಗೂ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತ ಪ್ಲಾಗ್ ರಾಜಾ (ನಾಗರಾಜ್) ಅವರುಮಾತನಾಡಿ, ಈ ಉಪಕ್ರಮಕ್ಕೆ ಎಲ್ಲ ವಯೋಮಾನದವರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X