ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಭಾಷಣ: ಮೂವರಿಗೆ ರಿಲೀಫ್ ನೀಡಿ ಪ್ರತಾಪ್ ಸಿಂಹಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್

ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಭಾಷಣ ಮಾಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಆದ್ರೆ, ಇದೇ ಪ್ರಕರಣದ ಇತರ ಮೂವರು ಆರೋಪಿಗಳಿಗೆ ರಿಲೀಫ್ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
Pratap Simha
ಪ್ರತಾಪ್ ಸಿಂಹ
Updated on: 

ಕಲಬುರಗಿ: ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದು, ತನಿಖೆ ಮುಂದುವರಿಸಲು ಅನುಮತಿ ನೀಡಿದೆ. ಇದೇ ವೇಳೆ ಪ್ರಕರಣದ ಇತರ ಮೂವರು ಆರೋಪಿಗಳಾದ ಕಾರ್ಯಕ್ರಮದ ಆಯೋಜಕರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿ ನ್ಯಾಯಾಲಯ ರಿಲೀಫ್ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಪ್ರತಾಪ್ ಸಿಂಹ ವಿರುದ್ಧ ತನಿಖೆಗೆ ಹಸಿರು ನಿಶಾನೆ

ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ. ದೂರಿನಲ್ಲಿರುವ ಅಂಶಗಳು ಹಾಗೂ ಭಾಷಣದ ನಿರ್ದಿಷ್ಟ ಭಾಗಗಳನ್ನು ಗಮನಿಸಿದರೆ, ಗಲಭೆ ಪ್ರಚೋದನೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಗಳ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮೂವರು ಆಯೋಜಕರಿಗೆ ಬಿಗ್ ರಿಲೀಫ್

ಇದೇ ಪ್ರಕರಣದಲ್ಲಿ ಸಹ-ಆರೋಪಿಗಳಾಗಿದ್ದ ಕಾರ್ಯಕ್ರಮದ ಆಯೋಜಕರಾದ ಕರಣ್ ಸಿ. ಸುಬೇದಾರ್, ಶಿವಕುಮಾರ್ ಮತ್ತು ಗುರುರಾಜ ಅವರ ವಿರುದ್ಧದ ತನಿಖೆ ಹಾಗೂ ಎಫ್‌ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ. ಆಕ್ಷೇಪಾರ್ಹ ಹೇಳಿಕೆ ನೀಡುವಂತೆ ಪ್ರತಾಪ್ ಸಿಂಹ ಅವರಿಗೆ ಆಯೋಜಕರು ಪ್ರಚೋದನೆ ನೀಡಿದ್ದರು ಎಂಬುದಕ್ಕೆ ದೂರಿನಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಕೋರ್ಟ್ ಈ ವೇಳೆ ಸ್ಪಷ್ಟಪಡಿಸಿದೆ.

Pratap Simha
ಮೈಸೂರು ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ತಾರಕಕ್ಕೆ: ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲಿಗನಿಗೆ ಕೊಲೆ ಬೆದರಿಕೆ!

ಏನಿದು ಪ್ರಕರಣ?

2024ರ ಸೆಪ್ಟೆಂಬರ್ 21ರಂದು ಶಹಾಪುರದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರತಾಪ್ ಸಿಂಹ, ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಏಕೆ ಕಲ್ಲು ತೂರಾಟ ನಡೆಯುತ್ತದೆ ಎಂದು ಪ್ರಶ್ನಿಸಿ, ಈದ್ ಮಿಲಾದ್ ಮೆರವಣಿಗೆಗಳ ಮೇಲೆ ಹಿಂದೂಗಳು ಕಲ್ಲು ತೂರಿದ ಒಂದೇ ಒಂದು ಉದಾಹರಣೆಯನ್ನು ತೋರಿಸುವಂತೆ ಸವಾಲು ಹಾಕಿದ್ದರು. ಜೊತೆಗೆ, ಭಾರತದಲ್ಲಿ ಶೇ. 80ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂಗಳೂ ಸಹ ಕಲ್ಲುಗಳನ್ನು ಕೈಗೆತ್ತಿಕೊಂಡರೆ ಏನಾಗಬಹುದು ಎಂದು ಪ್ರಶ್ನಿಸಿದ ಅವರು, ಅಣ್ವಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯವಿರುವ ಭಾರತದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ತಯಾರಿಸಲು ಸಾಧ್ಯವಿಲ್ಲವೇ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದೆ ವೇಳೆ, ಹಿಂದೂಗಳು ಜಾತಿ ಭೇದ ಮರೆತು ಒಂದಾಗದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಎದುರಾದ ಪರಿಸ್ಥಿತಿಯೇ ಇಲ್ಲಿಯೂ ಎದುರಾಗಬಹುದು ಎಂದು ಎಚ್ಚರಿಸಿದ್ದರು.

ಅದರಂತೆ, ಈ ಭಾಷಣದ ವಿರುದ್ಧ ಸೆಪ್ಟೆಂಬರ್ 23, 2024ರಂದು ನೀಡಲಾದ ದೂರಿನ ಆಧಾರದ ಮೇಲೆ ಶಹಾಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 192 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X