ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದೆ.
Education minister Madhu Bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ
Updated on: 

ಕೊಪ್ಪಳ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳ ವಿತರಣೆ ವಿಳಂಬವಾಗುತ್ತಿರುವ ಕುರಿತು ಮನವಿ ಸಲ್ಲಿಸಲು ಬಂದಿದ್ದ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (ಎಸ್‌ಡಿಎಂಸಿ) ಸಮನ್ವಯ ಸಮಿತಿ ಅಧ್ಯಕ್ಷ ದೇವರಾಜ್ ಕಿನ್ನಾಳ ಅವರೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಚಿವರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಲಾ ಸಮಿತಿ ಒಕ್ಕೂಟ, ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಕೊಪ್ಪಳಕ್ಕೆ ಭೇಟಿ ನೀಡಿದ್ದ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು.

ಈ ಕುರಿತು ಮಾತನಾಡಿದ ದೇವರಾಜ್ ಕಿನ್ನಾಳ, "ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಪಠ್ಯಪುಸ್ತಕ ವಿತರಣೆ ವಿಳಂಬವಾಗುತ್ತಿರುವ ಬಗ್ಗೆ ಮನವಿ ಸಲ್ಲಿಸಲು ನಾವು ಬಂದಿದ್ದೆವು. ಆದರೆ, ಸಚಿವರು ಮನವಿ ಸ್ವೀಕರಿಸಲು ನಿರಾಕರಿಸಿದ್ದಲ್ಲದೆ, ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರು ಎಲ್ಲಿಗೆ ಹೋದರೂ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

Education minister Madhu Bangarappa
'ಬಾಯಿ ಮುಚ್ಚಿಕೊಂಡು ಕೇಳಯ್ಯ, ಕೇಳೋ ಯೋಗ್ಯತೆ ಇದ್ಯಾ ನಿನಗೆ?': ಶೂ, ಸಾಕ್ಸ್ ವಿತರಣೆ ವಿಳಂಬ ಪ್ರಶ್ನಿಸಿದವರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ದರ್ಪ? Video ವೈರಲ್..!

ಈ ಸಂದರ್ಭದಲ್ಲಿ ಸಚಿವರು, "ಅವರಿಗೆ ಇದನ್ನೆಲ್ಲ ಕೊಡಲು ಯಾರು ಹೋಗುತ್ತಾರೆ? ಸರಿಯಾಗಿ ಕೇಳಲು ಸಾಧ್ಯವಾಗದಿದ್ದರೆ ಸುಮ್ಮನಿರಬೇಕು" ಎಂದು ಹೇಳಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ, ಕಿನ್ನಾಳ ಅವರಿಗೆ ಸಾಮರ್ಥ್ಯವಿಲ್ಲ ಎಂಬ ಅರ್ಥದಲ್ಲಿ ಸಚಿವರು ಮಾತನಾಡಿದ್ದಾರೆ ಎಂದು ಎಸ್‌ಡಿಎಂಸಿ ಒಕ್ಕೂಟ ದೂರಿದೆ. ಸಚಿವರ ವರ್ತನೆಯನ್ನು ಖಂಡಿಸಿ ಒಕ್ಕೂಟ ಪ್ರಕಟಣೆಯನ್ನೂ ಬಿಡುಗಡೆ ಮಾಡಿದೆ.

ದಲಿತ ಸಮುದಾಯಕ್ಕೆ ಸೇರಿದ ಕಿನ್ನಾಳ ಅವರು ಎರಡು ಪ್ರಮುಖ ವಿಚಾರಗಳನ್ನು ಸಚಿವರ ಗಮನಕ್ಕೆ ತರಲು ಮುಂದಾಗಿದ್ದರು. ಶೈಕ್ಷಣಿಕ ವರ್ಷ ಮುಕ್ತಾಯದ ಹಂತಕ್ಕೆ ಬಂದರೂ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳು ವಿತರಣೆಯಾಗಿಲ್ಲ ಎಂಬುದು ಮೊದಲನೆಯ ವಿಚಾರ. ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಪ್ರಸ್ತಾಪಕ್ಕೆ ಒಕ್ಕೂಟದ ವಿರೋಧ ವ್ಯಕ್ತಪಡಿಸುವುದು ಎರಡನೇ ಉದ್ದೇಶವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂವಿಧಾನದ 21ಎ ವಿಧಿಯು 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಖಾತರಿಪಡಿಸಿದೆ. ಶಾಲಾ ಸಮಿತಿಯ ಕನಿಷ್ಠ ಮುಕ್ಕಾಲು ಭಾಗದಷ್ಟು ಸದಸ್ಯರು ಮಕ್ಕಳ ಪೋಷಕರು ಅಥವಾ ಪಾಲಕರಾಗಿರಬೇಕು. ಶಾಲೆಯ ಕಾರ್ಯನಿರ್ವಹಣೆ ಮತ್ತು ಅನುದಾನದ ಬಳಕೆಯ ಮೇಲ್ವಿಚಾರಣೆ ನಡೆಸುವುದು ಈ ಸಮಿತಿಯ ಕರ್ತವ್ಯವಾಗಿದೆ ಎಂದು ಒಕ್ಕೂಟ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X