ರಾಜ್ಯ

Vande Bharat ರೈಲಿನಲ್ಲಿ ಆಹಾರ ಗುಣಮಟ್ಟದ ನಿರ್ಲಕ್ಷ್ಯ: ವಡೆಯಲ್ಲಿ ಲೋಹದ ಬೋಲ್ಟ್ ಪತ್ತೆ; ಫೋಟೋ ವೈರಲ್, IRCTC ವಿರುದ್ಧ ಆಕ್ರೋಶ..!

Vande Bharat ರೈಲಿನಲ್ಲಿ ಆಹಾರ ಗುಣಮಟ್ಟದ ನಿರ್ಲಕ್ಷ್ಯ: ವಡೆಯಲ್ಲಿ ಲೋಹದ ಬೋಲ್ಟ್ ಪತ್ತೆ; ಫೋಟೋ ವೈರಲ್, IRCTC ವಿರುದ್ಧ ಆಕ್ರೋಶ..!
ವಡೆಯಲ್ಲಿ ಲೋಹದ ಬೋಲ್ಟ್ ಪತ್ತೆಯಾಗಿರುವುದು.
Published On :

ಬೆಂಗಳೂರು: ಬೆಂಗಳೂರು–ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಲಾದ ವಡಾದಲ್ಲಿ ತುಕ್ಕು ಹಿಡಿದ ದೊಡ್ಡ ಕಬ್ಬಿಣದ ಬೋಲ್ಟ್ ಪತ್ತೆಯಾಗಿರುವ ಘಟನೆ ನಡೆದಿದ್ದು, ರೈಲ್ವೆ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಮರ್ಥ್ ಕೊಯ್ದಾಳ್ ಎಂಬ ಪ್ರಯಾಣಿಕರು ವಡಾದಲ್ಲಿ ಪತ್ತೆಯಾದ ವಸ್ತುವಿನ ಚಿತ್ರವನ್ನು ಹಂಚಿಕೊಂಡು, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)ಕ್ಕೆ ಟ್ಯಾಗ್ ಮಾಡಿದ್ದಾರೆ.

ಆಹಾರದ ಗುಣಮಟ್ಟದಲ್ಲಿ ಗಂಭೀರ ಲೋಪವಾಗಿದೆ ಎಂದು ಆರೋಪಿಸಿರುವ ಅವರು, ಘಟನೆ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಬೆಂಗಳೂರುದಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ವೇಳೆ ರೈಲಿನ ಪ್ಯಾಂಟ್ರಿ ಸಿಬ್ಬಂದಿ ನೀಡಿದ ವಡಾದಲ್ಲಿ ದೊಡ್ಡ ಗಾತ್ರದ ಲೋಹದ ಬೋಲ್ಟ್ ಪತ್ತೆಯಾಗಿದೆ ಎಂದು ಸಮರ್ಥ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಗುಣಮಟ್ಟದ ಕುರಿತು ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ರೈಲ್ವೆ ಅಡುಗೆ ಸೇವೆಯ ಗುತ್ತಿಗೆದಾರರ ಹೊಣೆಗಾರಿಕೆಯ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ರೈಲ್ವೆ ಇಲಾಖೆಯ ದೂರು ಪರಿಹಾರ ವ್ಯವಸ್ಥೆಯ ಬಗ್ಗೆಯೂ ಒಬ್ಬ ಬಳಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ದೂರು ಸಲ್ಲಿಸಿದ ಬಳಿಕ ಉಲ್ಲೇಖ ಸಂಖ್ಯೆ ನೀಡಲಾಗುತ್ತದೆ. ಆದರೆ, ಕೈಗೊಂಡ ಕ್ರಮದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡದೆ ದೂರುಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಕೆಲವು ರೈಲುಗಳಿಗೆ ಆಹಾರ ಪೂರೈಸುವ ಅಡುಗೆ ಕೇಂದ್ರಗಳಲ್ಲಿನ ಸ್ವಚ್ಛತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಆಹಾರ ಪೂರೈಕೆ ಗುತ್ತಿಗೆ ನೀಡುವ ಮೊದಲು ಗುತ್ತಿಗೆದಾರರ ವಿಶ್ವಾಸಾರ್ಹತೆ ಮತ್ತು ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ನವೆಂಬರ್ 23ರಂದು ಜೈನ ಆಹಾರಕ್ಕೆ ಬೇಡಿಕೆ ಸಲ್ಲಿಸಿದ್ದ ಪ್ರಯಾಣಿಕರಿಗೆ ಮಾಂಸಾಹಾರ ನೀಡಲಾಗಿದೆ ಎಂಬ ಮತ್ತೊಂದು ಆರೋಪವನ್ನೂ ಬಳಕೆದಾರರೊಬ್ಬರು ಪ್ರಸ್ತಾಪಿಸಿದ್ದಾರೆ. ಈ ಕುರಿತು ದೂರು ನೀಡಿದರೂ ಯಾವುದೇ ಗಮನಾರ್ಹ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದ್ದಾರೆ.

ಐಆರ್‌ಸಿಟಿಸಿ ವಿಷಾದ

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರ ಕುರಿತು ಐಆರ್‌ಸಿಟಿಸಿ ಪ್ರತಿಕ್ರಿಯೆ ನೀಡಿದ್ದು, ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ, ಈ ಲೋಪಕ್ಕೆ ಕಾರಣವಾದ ಸೇವಾ ಪೂರೈಕೆದಾರರ ವಿರುದ್ಧ ಕಠಿಣ ದಂಡನಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು, ಅಡುಗೆ ತಯಾರಿಸುವ ಮುನ್ನ ಎಲ್ಲಾ ಉಪಕರಣಗಳನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP) ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.