

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಅವಳಿ ಸುರಂಗ ರಸ್ತೆ ಯೋಜನೆಗೆ ಇದೀಗ ಮತ್ತೊಂದು ಕಾನೂನು ತೊಡಕು ಎದುರಾಗುವ ಸಾಧ್ಯತೆ ಇದೆ.
ಜಲಮೂಲಗಳ ಸಂರಕ್ಷಣೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಈ ಯೋಜನೆ ಉಲ್ಲಂಘಿಸುತ್ತದೆ ಎಂಬ ಆರೋಪ ಕೇಳಿಬಂದಿದೆ.
ಯೋಜನೆಗಾಗಿ ಹೆಬ್ಬಾಳ ಕೆರೆಯ 3.45 ಎಕರೆ ಭೂಮಿಯನ್ನು ಬಳಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಕೆಟಿಸಿಡಿಎ) ಅನುಮತಿ ಪಡೆದಿದೆ. ಆದರೆ, ಸುಪ್ರೀಂ ಕೋರ್ಟ್‌ನ ಆದೇಶಗಳ ಪ್ರಕಾರ ಎಲ್ಲ ಜೌಗು ಪ್ರದೇಶಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸಬೇಕು ಮತ್ತು ಅವುಗಳನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಬಾರದು.
ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ 2.25 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಯಾವುದೇ ಜಲಮೂಲವನ್ನು ಜೌಗು ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡವನ್ನು ಅನ್ವಯಿಸಿದರೆ ರಾಜ್ಯದಲ್ಲಿ ಸುಮಾರು 14,000 ಜೌಗು ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ. ಆದರೆ, ಇವುಗಳಲ್ಲಿ ಬಹುತೇಕ ಪ್ರದೇಶಗಳನ್ನು ರಾಜ್ಯ ಸರ್ಕಾರ ಸೂಕ್ತವಾಗಿ ಸಂರಕ್ಷಿಸಿಲ್ಲ ಎಂದು ತಜ್ಞರು ಆರೋಪಿಸಿದ್ದು, ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ ಪ್ರೊ. ಟಿ.ವಿ. ರಾಮಚಂದ್ರ ಮಾತನಾಡಿ, ಕೆಟಿಸಿಡಿಎ ಮತ್ತು ಬಿಡಿಎಗಳು ಯೋಜನೆಗೆ ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರದ (ಕೆಡಬ್ಲ್ಯುಎ) ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರವು ಯೋಜನೆಯ ಕಡತವನ್ನು ಪರಿಶೀಲಿಸಿದ ಬಳಿಕ ಅದನ್ನು ಭಾರತ ಜೌಗು ಪ್ರದೇಶ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಜೌಗು ಪ್ರದೇಶ ಸಮಿತಿಗೆ ಕಳುಹಿಸಿ ಚರ್ಚೆ ಮತ್ತು ಅನುಮೋದನೆ ಪಡೆಯಬೇಕಿತ್ತು ಎಂದು ಪ್ರೊ. ರಾಮಚಂದ್ರ ಹೇಳಿದ್ದಾರೆ.
ಈಗಾಗಲೇ ನೀಡಲಾಗಿರುವ ಅನುಮತಿಯು 2010 ಮತ್ತು 2017ರ ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ನಿರ್ವಹಣಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸಲಾಗಿಲ್ಲ. ಅರಿವಿನ ಕೊರತೆಯ ನೆಪದಲ್ಲಿ ತರಾತುರಿಯಲ್ಲಿ ಕೈಗೊಂಡಿರುವ ಈ ಕ್ರಮವು ನ್ಯಾಯಾಲಯದ ಆದೇಶಗಳು ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಹೆಬ್ಬಾಳ ಕೆರೆಯ ಕೆಲವು ಭಾಗಗಳಲ್ಲಿ ಈಗಾಗಲೇ ಒತ್ತುವರಿಯಾಗಿದೆ. ಇದೀಗ ಸುರಂಗ ರಸ್ತೆ ಯೋಜನೆಗಾಗಿ ಕೆರೆಯ ಭಾಗವನ್ನು ಬಳಸಲು ಅವಕಾಶ ನೀಡಿದರೆ ಜಲಮೂಲ ಮತ್ತಷ್ಟು ನಾಶವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರೊ. ರಾಮಚಂದ್ರ ಅವರು ಭಾರತ ಜೌಗು ಪ್ರದೇಶ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಜೌಗು ಪ್ರದೇಶ ಸಮಿತಿಯ ಸದಸ್ಯರೂ ಆಗಿದ್ದಾರೆ.
ಯೋಜನೆಗೆ ಅನುಮತಿ ಕೋರಿ ಇದುವರೆಗೆ ಯಾವುದೇ ಕಡತ ತಮ್ಮ ಬಳಿ ಬಂದಿಲ್ಲ ಎಂದು ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಕೆಟಿಸಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಕೆಟಿಸಿಡಿಎಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, “ಹೆಬ್ಬಾಳ ಕೆರೆಯ ಕೆಳಭಾಗದಲ್ಲಿರುವ ಕೆರೆ ಭೂಮಿಯನ್ನು ಭೂಗತ ಯೋಜನೆಗಾಗಿ ಬಳಸಲು ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ. ಜೌಗು ಪ್ರದೇಶ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಅನುಮತಿ ನೀಡುವ ಮೊದಲು ಬಿಡಿಎಯಿಂದ ಸ್ಪಷ್ಟೀಕರಣ ಕೋರಿ ಕಡತವನ್ನು ಎರಡು ಬಾರಿ ವಾಪಸ್ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬಿಡಿಎ ಮೊದಲ ಬಾರಿಗೆ 2026ರ ಜೂನ್ 29ರಂದು ಕೆಟಿಸಿಡಿಎಯನ್ನು ಸಂಪರ್ಕಿಸಿತ್ತು. ಬಳಿಕ ಜುಲೈ 17ರಂದು ಮತ್ತೊಮ್ಮೆ ಪತ್ರ ವ್ಯವಹಾರ ನಡೆಸಿತ್ತು. ಜುಲೈ 23, 2026ರಂದು ಕೆಟಿಸಿಡಿಎ ಯೋಜನೆಗೆ ಅನುಮತಿ ನೀಡಿದೆ
ಬಿಡಿಎ ಅಧಿಕಾರಿಯೊಬ್ಬರು ಮಾತನಾಡಿ, ಕೆಟಿಸಿಡಿಎಯಿಂದ ಪಡೆದ ಅನುಮತಿಯೇ ಸಾಕಾಗುತ್ತದೆ. ಜೌಗು ಪ್ರದೇಶ ಪ್ರಾಧಿಕಾರದಿಂದ ಯಾವುದೇ ಅನುಮತಿ ಕೋರಿಲ್ಲ. ಕೆಟಿಸಿಡಿಎ 2014ರಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ ಸಂಸ್ಥೆಯಾಗಿರುವುದರಿಂದ ಅದರ ಅನುಮತಿ ಪಡೆಯಲಾಗಿದೆ. ಹೆಬ್ಬಾಳ ಕೆರೆಯ ಉಸ್ತುವಾರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದು, ಈ ವಿಚಾರವನ್ನು ಅವರು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.