ಕಾವೇರಿ ವಿವಾದ: ತಮಿಳುನಾಡಿಗೆ 4,000 ದಿಂದ 2,000 ಕ್ಯೂಸೆಕ್‌ಗಳಿಗೆ ಇಳಿಸುವಂತೆ ಕರ್ನಾಟಕದ ಮನವಿ; ಚಲುವರಾಯಸ್ವಾಮಿ

ರಾಜ್ಯವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಚಿವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಸೆಪ್ಟೆಂಬರ್ 24ರ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡುವುದು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
chaluvarayaswamy
ಚಲುವರಾಯಸ್ವಾಮಿ
Updated on: 

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಜಲಾಶಯಗಳಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸೆಪ್ಟೆಂಬರ್ 24, 2026ರಂದು ನಡೆದ 58ನೇ ಸಭೆಯಲ್ಲಿ ನೀಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕರ್ನಾಟಕ ಸರ್ಕಾರ ಇಂದು ಪ್ರಾಧಿಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಸಭೆಯಲ್ಲಿ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 4,000 ಕ್ಯೂಸೆಕ್‌ ನೀರು ಹರಿಸಲು ಪ್ರಾಧಿಕಾರ ನಿರ್ದೇಶನ ನೀಡಿತ್ತು. ಆದರೆ, ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಂಪೂರ್ಣ ಮುಕ್ತಾಯಗೊಂಡಿದ್ದು, ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕ್ಷೀಣಿಸಿದೆ.

ರಾಜ್ಯವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಚಿವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಸೆಪ್ಟೆಂಬರ್ 24ರ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡುವುದು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಈ ನಾಲ್ಕೂ ಜಲಾಶಯಗಳಲ್ಲಿ ಬಳಕೆಗೆ ಲಭ್ಯವಿರುವ ಒಟ್ಟು ನೀರು ಕೇವಲ 49 ಟಿಎಂಸಿ ಮಾತ್ರವಾಗಿದೆ. ಮುಂದಿನ ಜೂನ್ 2027ರವರೆಗೆ ರಾಜ್ಯದ ಕುಡಿಯುವ ನೀರಿನ ಅಗತ್ಯತೆ, ಪರಿಸರ ಸಂರಕ್ಷಣೆ ಹಾಗೂ ಆವಿಯಾಗುವಿಕೆಯ ನಷ್ಟವನ್ನು ಸರಿದೂಗಿಸಲು ಈ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಕಾಯ್ದಿರಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯಕ್ಕಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

chaluvarayaswamy
ಬರಗಾಲವಿದ್ದರೂ No Worry: ಅಕ್ಟೋಬರ್ 11 ರಿಂದ 6 ದಿನ 'ಕಾವೇರಿ ಆರತಿ'ಗೆ ಸರ್ಕಾರ ರೆಡಿ; ಚಲುವರಾಯಸ್ವಾಮಿ ಮಾಹಿತಿ

ಕಾವೇರಿ ಕಣಿವೆಯ ಸುಮಾರು 47 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಇಡೀ ಕಣಿವೆ ಪ್ರದೇಶ ತೀವ್ರ ಬರಗಾಲಕ್ಕೆ ಸಿಲುಕಿದೆ. ಆದಾಗ್ಯೂ, ಪ್ರಸಕ್ತ ಜಲ ವರ್ಷದಲ್ಲಿ ಪ್ರಾಧಿಕಾರದ ಎಲ್ಲಾ ನಿರ್ದೇಶನಗಳನ್ನು ಕರ್ನಾಟಕ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದೆ.

ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಬಿಳಿಗುಂಡ್ಲುವಿನಲ್ಲಿ 44.21 ಟಿಎಂಸಿ ನೀರು ದಾಖಲಾಗಿದೆ. ಮತ್ತೊಂದೆಡೆ, ತಮಿಳುನಾಡಿಗೆ ಅನುಕೂಲಕರವಾದ ಈಶಾನ್ಯ ಮುಂಗಾರು ಸಾಮಾನ್ಯ ಅಥವಾ ಉತ್ತಮವಾಗಿರಲಿದ್ದು, ಅಲ್ಲಿ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಎಲ್ಲಾ ವಾಸ್ತವಾಂಶಗಳ ಆಧಾರದ ಮೇಲೆ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಗಣನೀಯ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ರಾಜ್ಯವಿದೆ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ಪ್ರಾಧಿಕಾರವು ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಿ, ಬಿಳಿಗುಂಡ್ಲುವಿನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು ಪ್ರತಿದಿನ 2,000 ಕ್ಯೂಸೆಕ್‌ಗೆ ಇಳಿಸುವ ಮೂಲಕ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈಶಾನ್ಯ ಮುಂಗಾರು ತಮಿಳುನಾಡಿಗೆ ಅನುಕೂಲಕರವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷದ ಈಶಾನ್ಯ ಮುಂಗಾರು ಸಾಮಾನ್ಯ ಅಥವಾ ಉತ್ತಮವಾಗಿರುವ ಸಾಧ್ಯತೆಯಿದೆ. ಇದು ತಮಿಳುನಾಡಿನ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಅಂಶಗಳನ್ನು ಪರಿಗಣಿಸಿ, ಪ್ರಾಧಿಕಾರವು ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ದಿನಕ್ಕೆ 2,000 ಕ್ಯೂಸೆಕ್‌ಗಳಿಗೆ ಇಳಿಸುವ ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com