SIR ಬಳಿಕ ವಿಶೇಷ ನೋಂದಣಿ ಅಭಿಯಾನ: ಅಕ್ಟೋಬರ್ 27ಕ್ಕೆ ಆರಂಭ

SIR ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಅಭಿಯಾನ ನಡೆಯಲಿದೆ. ಕರ್ನಾಟಕದಲ್ಲಿ SIR ಬಳಿಕ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದ್ದು, ಆ ಬಳಿಕ ವಿಶೇಷ ನೋಂದಣಿ ಅಭಿಯಾನ ಆರಂಭವಾಗಲಿದೆ.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳಲ್ಲಿನ ಎಲ್ಲ ಮುಖ್ಯ ಚುನಾವಣಾಧಿಕಾರಿಗಳಿಗೆ (CEO) ಭಾರತ ಚುನಾವಣಾ ಆಯೋಗ (ECI) ವಿಶೇಷ ಮತದಾರರ ನೋಂದಣಿ ಅಭಿಯಾನ ನಡೆಸುವಂತೆ ಸೂಚಿಸಿದೆ.

SIR ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಅಭಿಯಾನ ನಡೆಯಲಿದೆ. ಕರ್ನಾಟಕದಲ್ಲಿ SIR ಬಳಿಕ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದ್ದು, ಆ ಬಳಿಕ ವಿಶೇಷ ನೋಂದಣಿ ಅಭಿಯಾನ ಆರಂಭವಾಗಲಿದೆ.

ಈ ಆದೇಶಗಳನ್ನು ನಿನ್ನೆ ಶುಕ್ರವಾರ ಸಾರ್ವಜನಿಕಗೊಳಿಸಲಾಗಿದೆ. ದೇಶದ ವಿವಿಧೆಡೆ ಪ್ರತಿಪಕ್ಷಗಳು ಹಾಗೂ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ SIR ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಒಂದು ದಿನದ ಬಳಿಕ ಈ ಆದೇಶಗಳು ಹೊರಬಿದ್ದಿವೆ. SIR ವೇಳೆ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.

ಆದೇಶಗಳ ಜೊತೆಗೆ ECI ವಿವರವಾದ ಪ್ರಶ್ನಾವಳಿಯನ್ನೂ ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗದ ಆ್ಯಪ್‌ನ ಕಾರ್ಯವಿಧಾನ, ‘ವೋಟ್ ಚೋರಿ’ ಹಾಗೂ SIR ಅನುಷ್ಠಾನದ ವಿಧಾನ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ಈ ಕುರಿತು ಸಂವಹನ ಇದೀಗಷ್ಟೇ ತಮ್ಮ ಕಚೇರಿಗೆ ಬಂದಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಮತದಾರರ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ವಿಶೇಷ ಅಭಿಯಾನಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

SIRನ ಮೊದಲ ಹಂತದಲ್ಲಿ ಮನೆ-ಮನೆ ಸಮೀಕ್ಷೆ ನಡೆಸುವಾಗ, ಹೆಸರು ಸೇರ್ಪಡೆಗೆ ಫಾರ್ಮ್-6, ಹೆಸರು ಅಳಿಸುವಿಕೆಗೆ ಫಾರ್ಮ್-7 ಮತ್ತು ತಿದ್ದುಪಡಿಗೆ ಫಾರ್ಮ್-8ಗಳನ್ನು ವಿತರಿಸಲಾಗಿತ್ತು. ನಾಗರಿಕರು ಆನ್‌ಲೈನ್‌ನಲ್ಲಿಯೂ ಈ ಅರ್ಜಿಗಳನ್ನು ಭರ್ತಿ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15,17,042 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡವರು, 65,45,679 ಮಂದಿ ಮೃತಪಟ್ಟವರು

ECI ತನ್ನ ಆದೇಶದಲ್ಲಿ, ಪ್ರಸ್ತುತ ಮತದಾರರ ಪಟ್ಟಿಯನ್ನು SIRಗೆ ಮುನ್ನದ ಮತದಾರರ ಪಟ್ಟಿಯೊಂದಿಗೆ ಹೋಲಿಸಿ, ಪ್ರಸ್ತುತ ಪಟ್ಟಿಯಲ್ಲಿ ಹೆಸರುಗಳು ಸೇರ್ಪಡೆಯಾಗದಿರುವ ಮತದಾರರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸೂಚಿಸಿದೆ. ಈ ಪಟ್ಟಿಯಲ್ಲಿ ಮತದಾರರ ಪ್ರಸ್ತುತ ಸ್ಥಿತಿಯನ್ನು BLOಗಳು ನಮೂದಿಸಬೇಕು.

ಅಂತಹ ಮತದಾರರ ಮನೆಗಳಿಗೆ ಭೇಟಿ ನೀಡಿ ಅವರ ಪ್ರಸ್ತುತ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಫಾರ್ಮ್-6 ಮೂಲಕ ಮತದಾರರಾಗಿ ನೋಂದಾಯಿಸಿಕೊಳ್ಳಲು ನೆರವು ನೀಡಬೇಕು ಎಂದು ECI BLOಗಳಿಗೆ ಸೂಚಿಸಿದೆ.

ಪ್ರತಿಯೊಬ್ಬ BLO ವಾರಕ್ಕೆ ಕನಿಷ್ಠ 20-25 ಮತದಾರರ ಮನೆಗಳಿಗೆ ಭೇಟಿ ನೀಡಿ, ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಭಿಯಾನದ ವೇಳೆ ಮೊದಲ ಬಾರಿಗೆ ಮತದಾನ ಮಾಡುವವರನ್ನೂ ನೋಂದಾಯಿಸಲಾಗುತ್ತದೆ.

BLOಗಳು ಸಿದ್ಧಪಡಿಸುವ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ನೇಮಿಸಿರುವ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ (BLA) ಹಂಚಿಕೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಭರ್ತಿ ಮಾಡಿದ ಫಾರ್ಮ್-6 ಅರ್ಜಿಗಳೊಂದಿಗೆ ಈ ಪಟ್ಟಿಯನ್ನು ಮತದಾರರ ನೋಂದಣಿ ಅಧಿಕಾರಿಗಳಿಗೆ (ERO) ನೀಡಲಾಗುತ್ತದೆ. ಅವರು ಸ್ಥಳ ಪರಿಶೀಲನೆ ನಡೆಸಿ ಹೆಸರುಗಳನ್ನು ಸೇರ್ಪಡೆ ಮಾಡಲಿದ್ದಾರೆ.

ಅಭಿಯಾನ ಪೂರ್ಣಗೊಂಡ ಬಳಿಕ, ಯಾವುದೇ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಬೂತ್‌ವಾರು ಪಟ್ಟಿಯನ್ನು BLAಗಳಿಗೆ ನೀಡಲಾಗುತ್ತದೆ.

ಫಾರ್ಮ್-6, 7 ಮತ್ತು 8ಕ್ಕೆ ಸಂಬಂಧಿಸಿದ ಸುಳ್ಳು ಘೋಷಣೆಗಳನ್ನು ಸಲ್ಲಿಸುವವರ ವಿರುದ್ಧ ಹಾಗೂ ಬೃಹತ್ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ DEOಗಳು ಮತ್ತು EROಗಳಿಗೆ ಸೂಚನೆ ನೀಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್ ಪ್ರಮಾಣದ ಹೆಸರುಗಳ ಅಳಿಸುವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಒಟ್ಟು 4.46 ಕೋಟಿ ನೋಂದಾಯಿತ ಮತದಾರರ ಮಾಹಿತಿಯಿದ್ದು. ASDDO ಪಟ್ಟಿಯಿಂದ ತೆಗೆದುಹಾಕಲಾದವರು ಹೊರಗಿದ್ದಾರೆ. ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದವರ ಹೆಸರುಗಳನ್ನು ಅಳಿಸಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ECI ನಿರ್ದೇಶನದಂತೆ ಈ ಸಂಪೂರ್ಣ ಅಭಿಯಾನದ ಪ್ರಗತಿಯನ್ನು CEO ಮತ್ತು DEOಗಳು ನಿಕಟವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ.

ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ವಿಶೇಷ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ವಿಶೇಷವಾಗಿ ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವವರು, ಕಾರ್ಮಿಕ ಕಾಲೋನಿಗಳ ನಿವಾಸಿಗಳು, ನಿರಾಶ್ರಿತರು ಹಾಗೂ ಅಂಚಿನಲ್ಲಿರುವ ವರ್ಗಗಳ ಜನರಿಗೆ ಈ ಶಿಬಿರಗಳ ಮೂಲಕ ನೆರವು ನೀಡಲಾಗುತ್ತದೆ.

CEO ಕಚೇರಿಯ ದತ್ತಾಂಶದ ಪ್ರಕಾರ, ಕಳೆದ ಜೂನ್ 16ರವರೆಗೆ ಕರ್ನಾಟಕದಲ್ಲಿ ಒಟ್ಟು 5,54,32,314 ಮತದಾರರಿದ್ದರು. SIRನ ಭಾಗವಾಗಿ ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ, ಆಗಸ್ಟ್ 24ರ ವೇಳೆಗೆ ಕರ್ನಾಟಕದಲ್ಲಿ ಒಟ್ಟು 4,46,80,151 ಮತದಾರರಿದ್ದರು. ಇವರಲ್ಲಿ 2,23,18,784 ಪುರುಷರು ಮತ್ತು 2,26,60,092 ಮಹಿಳೆಯರು ಇದ್ದರು.

‘Absent, Shifted, Dead, Duplicate ಮತ್ತು Others’ (ಫಾರ್ಮ್‌ಗಳಿಗೆ ಸಹಿ ಹಾಕಲು ಇಚ್ಛಿಸದವರು) ವಿಭಾಗಗಳ ಅಡಿಯಲ್ಲಿ ಒಟ್ಟು 1,07,96,339 ಹೆಸರುಗಳನ್ನು ತೆಗೆದುಹಾಕಲಾಗಿದೆ.

CEO ದತ್ತಾಂಶದ ಪ್ರಕಾರ, ಒಟ್ಟು ಮತದಾರರ ಪೈಕಿ 1,07,96,339 (19.48%) ಮಂದಿಯನ್ನು ‘Absent’ ಎಂದು ಪಟ್ಟಿ ಮಾಡಲಾಗಿದೆ. ಅಂದರೆ, CEO ಕರ್ನಾಟಕದ ದತ್ತಾಂಶದಲ್ಲಿ ನಮೂದಿಸಿರುವ ನಿವಾಸದ ವಿಳಾಸದಲ್ಲಿ ಈ ಮತದಾರರು ಪತ್ತೆಯಾಗಿಲ್ಲ.

ಇದೇ ವೇಳೆ 15,17,042 (2.74%) ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು, 65,45,679 (11.81%) ಮಂದಿಯನ್ನು ಮೃತಪಟ್ಟವರು ಎಂದು, 7,09,870 (1.28%) ಮಂದಿಯನ್ನು ನಕಲಿ/ಪುನರಾವರ್ತಿತ ಮತದಾರರು ಎಂದು ಹಾಗೂ 3,83,884 (0.69%) ಮಂದಿಯನ್ನು ಇತರೆ ವಿಭಾಗಕ್ಕೆ ಸೇರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com