

ಮೈಸೂರು: ಅವಿವಾಹಿತ ಪುರುಷರಿಗೆ, ಅದರಲ್ಲೂ ರೈತರಿಗೆ ವಧು ಹುಡುಕಲು ಸಹಾಯವಾಗುವಂತಹ ಯೋಜನೆಯೊಂದನ್ನು ರೂಪಿಸುವಂತೆ ರೈತರೊಬ್ಬರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿ ಗಮನ ಸೆಳೆದರು. 35ರಿಂದ 40 ವರ್ಷ ವಯಸ್ಸಿನ ಅನೇಕ ಪುರುಷರು ವಿವಾಹವಾಗದೆ ತೀವ್ರ ಹತಾಶೆಗೆ ಒಳಗಾಗಿದ್ದಾರೆ, ಅವರ ಪೋಷಕರು ಅದೇ ಕೊರಗಿನಲ್ಲಿ ಪ್ರಾಣಬಿಟ್ಟಿದ್ದಾರೆ ಎಂದು ಹಳ್ಳಿ ಪ್ರದೇಶಗಳಲ್ಲಿ ರೈತ ಯುವಕರ ಸಮಸ್ಯೆಗಳನ್ನು ಮುಂದಿಟ್ಟರು.
ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ರೈತ, 35ರಿಂದ 40 ವರ್ಷ ವಯಸ್ಸಿನ ಅನೇಕ ಪುರುಷರು ಇನ್ನೂ ಅವಿವಾಹಿತರಾಗಿದ್ದಾರೆ. ಬಡಪಾಪ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಹತಾಶರಾಗಿದ್ದಾರೆ. ಅವರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಹೇಳಿದರು.
ಸರ್, ಬಡವರು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು, ಏನಾದರೂ ಒಂದು ಯೋಜನೆ ಮಾಡಬೇಕು ಎಂದು ರೈತ ಮನವಿ ಮಾಡಿಕೊಂಡಾಗ ಸಿಎಂ ಡಿ ಕೆ ಶಿವಕುಮಾರ್, “ಏನು? ಏನಾಗಿದೆ?” ಎಂದು ತಾಳ್ಮೆಯಿಂದ ಸಮಸ್ಯೆ ಆಲಿಸಿದರು.
ಈ ಸಮಸ್ಯೆ ಕರ್ನಾಟಕದಾದ್ಯಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದ ರೈತ, ಇದನ್ನು ಪರಿಹರಿಸಲು ಮುಖ್ಯಮಂತ್ರಿ ವಿಶೇಷ ಯೋಜನೆಯೊಂದನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಇಂದು ಹಳ್ಳಿಗಳಲ್ಲಿ ರೈತ ಯುವಕರು ಮದುವೆ ಮಾಡಿಕೊಳ್ಳಲು, ಹೆಣ್ಣು ಹುಡುಕಲು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಮನೆ ಕಟ್ಟಿಕೊಳ್ಳುತ್ತಾರೆ, ಜಮೀನು ಹೊಂದಿದ್ದಾರೆ. ಆದರೆ ಯಾರೂ ತಮ್ಮ ಹೆಣ್ಣುಮಕ್ಕಳನ್ನು ಅವರಿಗೆ ಮದುವೆ ಮಾಡಿಕೊಡಲು ಮುಂದೆ ಬರುತ್ತಿಲ್ಲ. ಯಾವುದಾದರೂ ವ್ಯವಸ್ಥೆ ಮಾಡಿಕೊಟ್ಟರೆ ಲಕ್ಷಾಂತರ ಯುವಕರ ಜೀವನಕ್ಕೆ ಪರಿಹಾರ ದೊರೆಯುತ್ತದೆ. ಅವರಿಗಾಗಿ ಏನಾದರೂ ಮಾಡುವಂತೆ ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ರೈತ ಕುಟುಂಬಗಳಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎಂದೂ ಅವರು ಹೇಳಿದರು.
“ಇದನ್ನು ತಮಾಷೆ ಎಂದುಕೊಳ್ಳಬೇಡಿ”
ರೈತ ಯುವಕರ ಮದುವೆ ಸಮಸ್ಯೆಯನ್ನ ಪ್ರಸ್ತಾಪಿಸಿದ ಯುವಕ, ಇದನ್ನ ಕೇವಲ ಹಾಸ್ಯ ಅಥವಾ ತಮಾಷೆಯ ವಿಷಯವಾಗಿ ಪರಿಗಣಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ. ಮದುವೆಯಾಗದೆ ಉಳಿಯುತ್ತಿರುವ ಯುವಕರ ಬದುಕಿನ ಬಗ್ಗೆ ಸರ್ಕಾರ ಗಮನಹರಿಸಬೇಕು. ಲಕ್ಷಾಂತರ ಯುವಕರಿಗೆ ಅನುಕೂಲವಾಗುವಂತಹ ಯೋಜನೆಯನ್ನ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾನೆ.
ಸಾಮಾನ್ಯವಾಗಿ ರೈತರನ್ನ ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಆದರೆ ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಯುವಕರಿಗೆ ಮದುವೆಯ ವಿಚಾರದಲ್ಲಿ ಎದುರಾಗುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು ಎಂಬುದು ಯುವಕನ ಮನವಿಯ ಮುಖ್ಯ ಆಶಯವಾಗಿತ್ತು.
ಡಿ.ಕೆ.ಶಿವಕುಮಾರ್ ಏನೆಂದರು?
ಯುವಕನ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದು ತಮಾಷೆಯ ವಿಷಯವಲ್ಲ, ಸಾಮಾಜಿಕ ಸಮಸ್ಯೆ ಎಂಬುದನ್ನ ಒಪ್ಪಿಕೊಂಡರು. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂಬ ಯುವಕನ ಅಳಲಿಗೆ ಪ್ರತಿಕ್ರಿಯಿಸಿದ ಅವರು, ಇಂದಿನ ಸಮಾಜದಲ್ಲಿ ಉದ್ಯೋಗ ಮತ್ತು ಜೀವನಶೈಲಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರವೃತ್ತಿಯ ಬಗ್ಗೆಯೂ ಪ್ರಸ್ತಾಪಿಸಿದರು. ಯುವಕನ ಮನವಿಗೆ ಸಮಾಧಾನಕರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, “ನಿನ್ನ ಹೆಸರಲ್ಲೇ ಯೋಜನೆ ತರೋಣ ಹೋಗು” ಎಂದು ಹೇಳಿದರು. ಮುಖ್ಯಮಂತ್ರಿಗಳ ಈ ಮಾತು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.