ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!

ಆರೋಪಿಯ ವೈಯಕ್ತಿಕ ಪರಿಸ್ಥಿತಿಗಳಷ್ಟೇ ಅಲ್ಲದೆ, ಸಾರ್ವಜನಿಕ ಆಡಳಿತ ಮತ್ತು ಸಮಾಜದ ಮೇಲೆ ಭ್ರಷ್ಟಾಚಾರ ಬೀರುವ ವ್ಯಾಪಕ ಪರಿಣಾಮವನ್ನೂ ಪರಿಗಣಿಸಿ ಶಿಕ್ಷೆಯ ಪ್ರಮಾಣ ನಿಗದಿಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
Representative image
ಪ್ರಾತಿನಿಧಿಕ ಚಿತ್ರ
Updated on: 

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಇಲಾಖೆಯ ಮಾಜಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಎಂ. ಎಸ್. ರವಿಕುಮಾರ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು 3 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ಬರೋಬ್ಬರಿ 1.38 ಕೋಟಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(e) ಜೊತೆಗೆ 13(2)ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರವಿಕುಮಾರ್ ದೋಷಿ ಎಂದು ತೀರ್ಪು ನೀಡಿದ ಬಳಿಕ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಶಿಕ್ಷೆ ಪ್ರಕಟಿಸಿದರು.

ತಿಳಿದಿರುವ ಆದಾಯದ ಮೂಲಗಳಿಂದ ಬಂದ ಆದಾಯಕ್ಕೆ ಹೋಲಿಸಿದಾಗ, ಖರ್ಚುಗಳನ್ನು ಕಡಿತಗೊಳಿಸಿದ ಬಳಿಕ ರೂ.1.38 ಕೋಟಿ ಮೌಲ್ಯದ ಆಸ್ತಿಗೆ ಅವರು ಸಮರ್ಪಕ ಲೆಕ್ಕ ನೀಡಲು ವಿಫಲರಾಗಿದ್ದರು ಎಂದು ನ್ಯಾಯಾಲಯ ತಿಳಿಸಿದೆ.

ಆರೋಪಿಯ ವೈಯಕ್ತಿಕ ಪರಿಸ್ಥಿತಿಗಳಷ್ಟೇ ಅಲ್ಲದೆ, ಸಾರ್ವಜನಿಕ ಆಡಳಿತ ಮತ್ತು ಸಮಾಜದ ಮೇಲೆ ಭ್ರಷ್ಟಾಚಾರ ಬೀರುವ ವ್ಯಾಪಕ ಪರಿಣಾಮವನ್ನೂ ಪರಿಗಣಿಸಿ ಶಿಕ್ಷೆಯ ಪ್ರಮಾಣ ನಿಗದಿಪಡಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚುವರಿ ಆಸ್ತಿ ಹಾಗೂ ಖರ್ಚುಗಳಿಗೆ ಸಂಬಂಧಿಸಿದ ರೂ.1.38 ಕೋಟಿ ಮೊತ್ತದ ಮೂಲವನ್ನು ವಿವರಿಸಲು ವಿಶ್ವಾಸಾರ್ಹ, ಸಮರ್ಥ ಹಾಗೂ ಕಾನೂನುಬದ್ಧವಾಗಿ ಸ್ವೀಕಾರಾರ್ಹ ಯಾವುದೇ ಸಾಕ್ಷ್ಯವನ್ನು ರವಿಕುಮಾರ್ ಅವರು ನ್ಯಾಯಾಲಯದ ಮುಂದೆ ಮಂಡಿಸಿಲ್ಲ.

1989ರ ಮಾರ್ಚ್ 1ರಿಂದ 2014ರ ಜೂನ್ 10ರವರೆಗಿನ ಪರಿಶೀಲನಾ ಅವಧಿಯಲ್ಲಿ ಈ ಮೊತ್ತವು ಅವರ ತಿಳಿದಿರುವ ಆದಾಯದ ಮೂಲಗಳ ಶೇ.49.5ರಷ್ಟಾಗಿದೆ. ಹೀಗಾಗಿ, ಅಭಿಯೋಜಕರು ಸಾಬೀತುಪಡಿಸಿದ ಹೆಚ್ಚಿನ ಪ್ರಮಾಣದ ಆಸ್ತಿಗೆ ಆರೋಪಿಯ ವಿವರಣೆ ಸಮರ್ಪಕವಾಗಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

Representative image
'ಕೊಡದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇನೆ': ಬೆದರಿಕೆ ಹಾಕಿ 3 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ..!

ಪ್ರಸ್ತುತ ಪ್ರಕರಣದ ವಾಸ್ತವಾಂಶಗಳು ಹಾಗೂ ಹೆಚ್ಚಿನ ಪ್ರಮಾಣದ ಆಸ್ತಿಯ ಪ್ರಮಾಣವು ಈ ಹಿಂದೆ ಆರೋಪಿಗಳಿಗೆ ಸಡಿಲಿಕೆ ಅಥವಾ ಅನುಕೂಲ ನೀಡಲಾಗಿದ್ದ ಪ್ರಕರಣಗಳಿಗಿಂತ ಭಿನ್ನವಾಗಿದೆ ಎಂದು ನ್ಯಾಯಾಲಯ ಗಮನಿಸಿತು.

ಇಲ್ಲಿ ಅಸಮ ಪ್ರಮಾಣದ ಆಸ್ತಿ ಶೇ.49.50ರಷ್ಟಿದ್ದು, ಅನುಮತಿಸಬಹುದಾದ ಸಹಿಷ್ಣುತೆಯ ಮಿತಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಿತು.

ಆದ್ದರಿಂದ, ಯಾವುದೇ ಅನುಮತಿಸಬಹುದಾದ ವ್ಯತ್ಯಾಸ ಅಥವಾ ಸಹಿಷ್ಣುತೆಯ ಮಿತಿಯ ಪ್ರಯೋಜನವನ್ನು ಆರೋಪಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರವಿಕುಮಾರ್ ಅವರು 1980ರಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಆಗಿ ಸೇವೆಗೆ ಸೇರಿದ್ದರು. ದಾಳಿ ನಡೆದ ಸಂದರ್ಭದಲ್ಲಿ ಅವರು ಬೆಂಗಳೂರಿನ ಅರಣ್ಯ ಇಲಾಖೆಯ ಯೋಜನಾ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

2014ರ ಜೂನ್ 9ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ ಆರೋಪಿಯ ನಿವಾಸ ಹಾಗೂ ಇತರ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಬಳಿಕ ಆದಾಯದ ಮೂಲಗಳಿಗೆ ಹೋಲಿಸಿದರೆ ಅಕ್ರಮವಾಗಿ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಪರಿಶೀಲನಾ ಅವಧಿಯಲ್ಲಿ ರವಿಕುಮಾರ್ ಅವರು ತಮ್ಮ ಹೆಸರಿನಲ್ಲಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ವಿವಿಧ ಆಸ್ತಿಗಳು ಮತ್ತು ಹಣಕಾಸಿನ ಸಂಪನ್ಮೂಲಗಳನ್ನು ಹೊಂದಿದ್ದರು. ಇವು ಅವರ ತಿಳಿದಿರುವ ಆದಾಯದ ಮೂಲಗಳಿಗೆ ಹೋಲಿಸಿದರೆ ಅಸಮ ಪ್ರಮಾಣದಲ್ಲಿದ್ದವು ಎಂದು ಲೋಕಾಯುಕ್ತ ಪೊಲೀಸರು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com