

ಮೈಸೂರು: ನಾಡಹಬ್ಬ ದಸರಾ ಮೈಸೂರಿನಲ್ಲಿ ವೈಭವದಿಂದ ನಡೆಯುತ್ತಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆಯೆಂದರೆ ಅದು ಅಂಬಾರಿ ಮೆರವಣಿಗೆ.
ಈ ಹಿಂದೆ ಅಂಬಾರಿ ಹೊರುತ್ತಿದ್ದ ಅಭಿಮನ್ಯು ಆನೆ ಈ ಬಾರಿ ನಿವೃತ್ತಗೊಂಡಿದ್ದು, ದಸರಾದಲ್ಲಿ ನಿಶಾನೆ ಆನೆಯಾಗಿ ಭಾಗಿಯಾಗಲಿದೆ. ಆದರೆ ಈ ವರೆಗೂ ಅಂಬಾರಿ ಹೊರಲಿರುವ ಆನೆ ಯಾವುದು ಎಂಬ ಕುತೂಹಲ ಮೂಡಿತ್ತು. ಈಗ ಅಂಬಾರಿ ಹೊರಲಿರುವ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಅಂಬಾರಿ ಹೊರುವ ರೇಸ್ನಲ್ಲಿದ್ದ ಮಹೇಂದ್ರ (Mahendra) ಆನೆಯನ್ನು ಕೈ ಬಿಡಲಾಗಿದೆ. ಈ ಬಾರಿ ದಸರಾ ಅಂಬಾರಿ ಆನೆಯಾಗಿ ಪ್ರಶಾಂತ ಆನೆ ಆಯ್ಕೆಯಾಗಿದೆ.
ಪ್ರಶಾಂತ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕೆರೆಕೊಪ್ಪ ಅರಣ್ಯ ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಬಳಿಕ ಕೊಡಗಿನ ದುಬಾರೆ ಶಿಬಿರದಲ್ಲಿ ಪ್ರಶಾಂತ ಆನೆಗೆ ತರಬೇತಿ ನೀಡಲಾಗಿದೆ. ಪ್ರಸ್ತುತ ಮಾವುತರಾಗಿ ಚಿನ್ನಪ್ಪ, ಕಾವಡಿ ಚಂದ್ರು ಪ್ರಶಾಂತ ಆನೆಯನ್ನು ನೋಡಿಕೊಳ್ಳುತ್ತಿದ್ದಾರೆ.
54 ವರ್ಷದ ಪ್ರಶಾಂತ ಕಳೆದ 3 ದಶಕಗಳಿಂದ ಅರಣ್ಯ ಇಲಾಖೆಯ ಆನೆಯಾಗಿದ್ದು, ಕಳೆದ 18 ವರ್ಷದಿಂದ ಮೈಸೂರು ದಸರಾದಲ್ಲಿ ಭಾಗಿಯಾಗಿದ್ದಾನೆ. ಆರಂಭ ದಿನಗಳಲ್ಲಿ ದಸರಾದ ಸಾಲು ಆನೆಯಾಗಿದ್ದ ಪ್ರಶಾಂತ, ನೌಪತ್ ಆನೆಯಾಗಿ ಕಾರ್ಯನಿರ್ವಹಿಸಿದ್ದಾನೆ. .
54 ವರ್ಷಗಳ ಪ್ರಶಾಂತ ಆನೆ, 2.61 ಮೀಟರ್ ಎತ್ತರವಿದ್ದು, 3.46 ಮೀಟರ್ ಉದ್ದವಿದೆ. 5100 ಕೆ.ಜಿ ತೂಕವಿದೆ. ಈ ಆನೆಯ ಗಂಭೀರ ಹಾಗೂ ಶಾಂತಿಯುತ ಸ್ವಭಾವವು ಮೆರವಣಿಗೆಯ ಭದ್ರತೆಗೆ ಅತ್ಯಂತ ಸಹಕಾರಿಯಾಗಿದೆ.