

ಹಾಸನ: ಕರ್ನಾಟಕದ ಅತ್ಯಂತ ಪವಿತ್ರ ಮತ್ತು ವಿಸ್ಮಯಕಾರಿ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿರುವ ಹಾಸನದ ಅಧಿದೇವತೆಯಾದ ಶ್ರೀ ಹಾಸನಾಂಬೆ ದೇವಿಯ ದರ್ಶನೋತ್ಸವವು, ಈ ಬಾರಿ ಅಕ್ಟೋಬರ್ 29, 2026 ರಿಂದ ಆರಂಭವಾಗಲಿದೆ. ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿ ಬಾಗಿಲು ತೆರೆಯುವ ಈ ಐತಿಹಾಸಿಕ ಉತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 8, 2026 ರವರೆಗೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ಆ ಕುರಿತ ವರದಿ ಇಲ್ಲಿದೆ:
ಈ ವರ್ಷದ ದರ್ಶನ ಯಾವಾಗ?
2026ರ ಸಾಲಿನ ಇತಿಹಾಸ ಪ್ರಸಿದ್ಧ ಹಾಸನದ ಶ್ರೀ ಹಾಸನಾಂಬೆ ದೇವಿಯ ದರ್ಶನೋತ್ಸವವು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿದೆ. ಇನ್ನು, ಸಂಪ್ರದಾಯದಂತೆ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಅದರಂತೆ, ಸಾರ್ವಜನಿಕ ಭಕ್ತಾದಿಗಳಿಗೆ ಅಕ್ಟೋಬರ್ 30ರ ಶುಕ್ರವಾರದಿಂದ ನವೆಂಬರ್ 10ರ ಮಂಗಳವಾರದವರೆಗೆ (ಒಟ್ಟು 12 ದಿನಗಳು) ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅದರಂತೆ, ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮತ್ತು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 10:30 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. (ಮಧ್ಯಾಹ್ನ 1 ರಿಂದ 3 ರವರೆಗೆ ನೈವೇದ್ಯ ಹಾಗೂ ಧಾರ್ಮಿಕ ಪೂಜೆಗಳಿಗಾಗಿ ವಿರಾಮವಿರುತ್ತದೆ).
ಇನ್ನು, ಈ ವರ್ಷದ ಹಾಸನಾಂಬೆ ದೇವಿಯ ದರ್ಶನೋತ್ಸವದ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ, ಭಕ್ತರು 6-7 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಅಸಮಾಧಾನಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಹೀಗಾಗಿ ಸಾಮಾನ್ಯ ಸಾರ್ವಜನಿಕರ ದರ್ಶನಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ಜೊತೆಗೆ, ವಿಐಪಿ ಪಾಸ್ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ಮಾಡಲಾಗುವುದು. ಗಣ್ಯರ ದರ್ಶನಕ್ಕೆ ಕಳೆದ ವರ್ಷದಂತೆಯೇ ನಿರ್ದಿಷ್ಟ ಸಮಯ ನಿಗದಿಪಡಿಸಲಾಗುತ್ತದೆ. ಹಾಗೂ ಪುಟ್ಟ ಮಕ್ಕಳೊಂದಿಗೆ ಆಗಮಿಸುವ ಮಹಿಳಾ ಭಕ್ತರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಈ ಬಾರಿಯ ಉತ್ಸವದಲ್ಲಿ ಯಾವುದೇ ದುಂದುವೆಚ್ಚಕ್ಕೆ ಆಸ್ಪದ ನೀಡುವುದಿಲ್ಲ. ಹಣಕಾಸಿನ ನಿರ್ವಹಣೆಯಲ್ಲಿ ಪೈಸಾ-ಟು-ಪೈಸಾ ಲೆಕ್ಕ ಇರಲಿದ್ದು, ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹಾಸನಾಂಬೆ ಸನ್ನಿಧಿಯ ವಿಸ್ಮಯ
ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ದೇವಿಯರು ದಕ್ಷಿಣ ಭಾರತದ ಸೌಂದರ್ಯಕ್ಕೆ ಮರುಳಾಗಿ ಹಾಸನದಲ್ಲಿ ನೆಲೆಸಿದರು ಎಂಬ ಉಲ್ಲೇಖವಿದೆ. ಇದರಲ್ಲಿ ವೈಷ್ಣವಿ, ಮಹೇಶ್ವರಿ ಮತ್ತು ಕೌಮಾರಿ ದೇವಿಯರು ದೇವಾಲಯದ ಒಳಗಿರುವ ಹುತ್ತದ ರೂಪದಲ್ಲಿ ನೆಲೆಸಿದ್ದಾರೆ. 12ನೇ ಶತಮಾನದ ಹೊಯ್ಸಳ ಶೈಲಿಯ ಹಾಗೂ ದ್ರಾವಿಡ ಶೈಲಿಯ ಗೋಪುರವನ್ನು ಹೊಂದಿರುವ ಈ ಸಂಕೀರ್ಣದಲ್ಲಿ ಹಾಸನಾಂಬೆ ದೇವಿಯ ಜೊತೆಗೆ ಉದ್ಭವ ಮೂರ್ತಿ ಶ್ರೀ ಸಿದ್ದೇಶ್ವರ ಸ್ವಾಮಿ ದೇಗುಲ ಹಾಗೂ ಒಂಬತ್ತು ತಲೆಗಳೊಂದಿಗೆ ವೀಣೆ ನುಡಿಸುತ್ತಿರುವ ರಾವಣನ ಅಪರೂಪದ ಚಿತ್ರಣವಿದ್ದು, ಹಿಂದಿನ ವರ್ಷ ದೇವಸ್ಥಾನದ ಬಾಗಿಲು ಮುಚ್ಚುವಾಗ ಹಚ್ಚಿದ ತುಪ್ಪದ ದೀಪ (ನಂದಾದೀಪ) ಮುಂದಿನ ವರ್ಷ ಬಾಗಿಲು ತೆರೆಯುವಾಗಲೂ ಉರಿಯುತ್ತಿರುತ್ತದೆ, ದೇವಿಗೆ ಮುಡಿಸಿದ ಹೂವುಗಳು ಬಾಡದೆ ಇರುತ್ತವೆ ಮತ್ತು ಇಟ್ಟ ನೈವೇದ್ಯದ ಅನ್ನವು ಕೆಡದೆ ಬಿಸಿಯಾಗಿಯೇ ಇರುತ್ತದೆ ಎಂಬುದು ಇಲ್ಲಿನ ಮಹತ್ತರವಾದ ಪವಾಡ ಮತ್ತು ನಂಬಿಕೆಯಾಗಿದೆ.