

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ಟೆಕ್ಕಿ ಪೂಜಾ ಮನೆಯಲ್ಲೇ ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಆರು ತಿಂಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ.
ಬೆಂಗಳೂರಿನ ಆಡುಗೋಡಿಯ ಬಾಡಿಗೆ ಮನೆಯಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದೀಗ ತನಿಖಾ ವರದಿಯಲ್ಲಿ ಸತ್ಯ ಬಹಿರಂಗವಾಗಿದೆ.
ಕಳೆದ ಏಪ್ರಿಲ್ 27 ರಂದು ಪೂಜಾ ಅವರ ಮೃತದೇಹ, ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅರೆಕೊಳೆತ ರೀತಿಯಲ್ಲಿ, ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ(ಎಫ್ಎಸ್ಎಲ್) ವರದಿಯ ಆಧಾರದಲ್ಲಿ ಅಂತಿಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಪೂಜಾ ದತ್ತಾ ಸಾವಿಗೆ ಶ್ವಾಸಕೋಶದ ವೈಫಲ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.
ಪೂಜಾ ದತ್ತಾ ವಾಸವಿದ್ದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹ ನಗ್ನವಾಗಿದ್ದ ರೀತಿಯೂ ಸೇರಿದಂತೆ ಮನೆಯೊಳಗಿನ ಪರಿಸ್ಥಿತಿಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದವು.
ಮನೆಯ ಗೋಡೆಗಳು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಕಾಗದಗಳ ಮೇಲೆ ಬರೆದಿದ್ದ ಬರಹಗಳನ್ನು ಅಂಟಿಸಲಾಗಿತ್ತು. ಅಲ್ಲದೆ, ಮನೆಗೆ ಯುವಕನೊಬ್ಬ ಬಂದು ಹೋಗುತ್ತಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿತ್ತು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲಾಗಿತ್ತು.
ಪೂಜಾ ದತ್ತಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯೂ ತನಿಖೆಯ ವೇಳೆ ಹೊರಬಂದಿದೆ. ಅಂತಿಮವಾಗಿ, ಅನಾರೋಗ್ಯದಿಂದ ಸಾವು ಸಂಭವಿಸಿದೆ ಎಂಬ ಅಭಿಪ್ರಾಯದೊಂದಿಗೆ ಆಡುಗೋಡಿ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.