ದೀಪಾವಳಿ, ದಸರಾ ಎಫೆಕ್ಟ್: ಸ್ವೀಟ್ ಶಾಪ್ ಗಳಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್, ನಿಯಮ ಉಲ್ಲಂಘಿಸಿದ 25 ಅಂಗಡಿಗಳಿಗೆ ನೋಟಿಸ್..!

ಕಾರ್ಯಾಚರಣೆಯ ಎರಡನೇ ದಿನವಾದ ಶುಕ್ರವಾರ ಅಧಿಕಾರಿಗಳು 106 ಘಟಕಗಳನ್ನು ಪರಿಶೀಲಿಸಿ, 145 ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಎರಡು ದಿನಗಳಲ್ಲಿ ಒಟ್ಟು 270 ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ದೀಪಾವಳಿ, ದಸರಾ ಎಫೆಕ್ಟ್: ಸ್ವೀಟ್ ಶಾಪ್ ಗಳಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್, ನಿಯಮ ಉಲ್ಲಂಘಿಸಿದ 25 ಅಂಗಡಿಗಳಿಗೆ ನೋಟಿಸ್..!
Updated on: 

ಬೆಂಗಳೂರು: ಹಬ್ಬದ ಸೀಸನ್ ಬೆನ್ನಲ್ಲೇ ರಾಜ್ಯ ಸರ್ಕಾರವು ಕಲಬೆರಕೆ ಮತ್ತು ಅಶುಚಿತ್ವದ ವಿರುದ್ಧ ಸಮರ ಸಾರಿದೆ. ಕರ್ನಾಟಕ ಆಹಾರ ಸುರಕ್ಷತೆ ಮತ್ತು ಜಾರಿ ಇಲಾಖೆಯು ಕಳೆದ ಎರಡು ದಿನಗಳಲ್ಲಿ (ಅಕ್ಟೋಬರ್ 15 ಮತ್ತು 16) ನಡೆಸಿದ ವಿಶೇಷ ಜಾಗೃತ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸಿದ 25 ಸಿಹಿ ತಿಂಡಿ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿದೆ.

ರಾಜ್ಯಾದ್ಯಂತ ಸಿಹಿ ತಿಂಡಿಗಳ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳಲ್ಲಿ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ವಿಶೇಷ ತಪಾಸಣಾ ಕಾರ್ಯಾಚರಣೆ ಮುಂದುವರಿಸಿದ್ದು, ಎರಡು ದಿನಗಳಲ್ಲಿ 186 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ.

ಇದರಂತೆ ನಿಯಮ ಉಲ್ಲಂಘಿಸಿದ 25 ಆಹಾರ ಉದ್ಯಮಗಳಿಗೆ ನೋಟಿಸ್ ನೀಡಲಾಗಿದ್ದು, ಇಬ್ಬರು ಉದ್ಯಮಿಗಳಿಗೆ ಒಟ್ಟು 7,000 ರೂ. ದಂಡ ವಿಧಿಸಲಾಗಿದೆ.

ಕಾರ್ಯಾಚರಣೆಯ ಎರಡನೇ ದಿನವಾದ ಶುಕ್ರವಾರ ಅಧಿಕಾರಿಗಳು 106 ಘಟಕಗಳನ್ನು ಪರಿಶೀಲಿಸಿ, 145 ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಎರಡು ದಿನಗಳಲ್ಲಿ ಒಟ್ಟು 270 ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಆಹಾರ ತಯಾರಿಕೆ ಮತ್ತು ಸಂಗ್ರಹಣಾ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು, ಆಹಾರ ನಿರ್ವಹಣೆ ಮಾಡುವ ಸಿಬ್ಬಂದಿ ಮಾನ್ಯ ವೈದ್ಯಕೀಯ ಕ್ಷಮತಾ ಪ್ರಮಾಣಪತ್ರ ಹೊಂದಿರದಿರುವುದು, ಅಗತ್ಯ ನೋಂದಣಿ ಅಥವಾ ಪರವಾನಗಿ ಇಲ್ಲದಿರುವುದು, ಆಹಾರ ಪೊಟ್ಟಣಗಳ ಮೇಲಿನ ವಿವರಗಳಲ್ಲಿ ಲೋಪ ಹಾಗೂ ಅಗತ್ಯ ದಾಖಲೆಗಳನ್ನು ನಿರ್ವಹಿಸದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳು ಪತ್ತೆಯಾಗಿವೆ.

ಇಲಾಖೆಯ ಜಿಲ್ಲಾವಾರು ಪಟ್ಟಿಯ ಪ್ರಕಾರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಕೋಲಾರ, ಕೊಪ್ಪಳ, ಕೊಡಗು, ಮೈಸೂರು ಗ್ರಾಮಾಂತರ, ಹಾಸನ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ದೀಪಾವಳಿ, ದಸರಾ ಎಫೆಕ್ಟ್: ಸ್ವೀಟ್ ಶಾಪ್ ಗಳಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್, ನಿಯಮ ಉಲ್ಲಂಘಿಸಿದ 25 ಅಂಗಡಿಗಳಿಗೆ ನೋಟಿಸ್..!
ಆಹಾರ ಸುರಕ್ಷತೆ ಗಂಭೀರ ಉಲ್ಲಂಘನೆ: ಚೇರ್‌ಮನ್ ಕ್ಲಬ್ ಕಿಚನ್ ಬಂದ್; ಹಲವು ವಸ್ತುಗಳು ವಶ; Video

ಇದರೊಂದಿಗೆ ಬಿಬಿಎಂಪಿ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ವಲಯಗಳು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ.

ಬಾಗಲಕೋಟೆಯ ವಲ್ಲಭಾಜಿ ಸ್ವೀಟ್ಸ್‌ನಲ್ಲಿ ಆಹಾರ ಸುರಕ್ಷತಾ ನೋಂದಣಿ ಪ್ರಮಾಣಪತ್ರವಿಲ್ಲದೆ ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದೆ. ಕಲಬುರಗಿಯ ಕಾಳಿ ಸ್ವೀಟ್ ಹೌಸ್‌ನಲ್ಲಿ ಸಿಬ್ಬಂದಿಯ ವೈದ್ಯಕೀಯ ಪ್ರಮಾಣಪತ್ರಗಳು ಇರಲಿಲ್ಲ. ಅದೇ ಜಿಲ್ಲೆಯ ಶ್ರೀ ರಾಮ್ ಸ್ವೀಟ್ಸ್ ಮತ್ತು ಅಗರ್ವಾಲ್ ಸ್ವೀಟ್ಸ್‌ನಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದೆ. ರಾಯಚೂರಿನ ಸಾಯಿ ಸ್ವೀಟ್ಸ್ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆ, ಜೈ ಸಂತೋಷಿ ಸ್ವೀಟ್ಸ್ ಮತ್ತು ನ್ಯೂ ಸಂತೋಷಿ ಸ್ವೀಟ್ಸ್‌ಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಉಲ್ಲಂಘನೆಗಳು ಪತ್ತೆಯಾಗಿವೆ.

ಕೋಲಾರದ ನಹರ್ ಸ್ವೀಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್, ಬಾಲಾಜಿ ಸ್ವೀಟ್ಸ್ ಮತ್ತು ಗೋಲ್ಡ್ ಸ್ಟಾರ್ ಸ್ವೀಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್‌ಗಳಿಗೆ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಬಾಲಾಜಿ ಸ್ವೀಟ್ಸ್‌ಗೆ 2,000 ರೂ. ಹಾಗೂ ಗೋಲ್ಡ್ ಸ್ಟಾರ್ ಸ್ವೀಟ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್‌ಗೆ 5,000 ರೂ. ದಂಡ ವಿಧಿಸಲಾಗಿದೆ.

ಇತರ ಉಲ್ಲಂಘನೆಗಳ ಪೈಕಿ, ಕೊಪ್ಪಳದ ಶ್ರೀ ದುರ್ಗಾ ಸ್ವೀಟ್ಸ್‌ನಲ್ಲಿ ಆಹಾರ ಲೇಬಲ್‌ಗಳಿಗೆ ಸಂಬಂಧಿಸಿದ ಲೋಪಗಳು ಕಂಡುಬಂದಿವೆ. ಬೆಂಗಳೂರಿನ ಬಿಬಿಎಂಪಿ ದಕ್ಷಿಣ ವಲಯದ ಆಶಾ ಸ್ವೀಟ್ಸ್‌ನಲ್ಲಿ ಅಗತ್ಯ ದಾಖಲೆಗಳ ಕೊರತೆ ಪತ್ತೆಯಾಗಿದೆ. ಹುಬ್ಬಳ್ಳಿಯ ಶ್ರೀ ರೇಣುಕಾ ಸ್ವೀಟ್ಸ್‌ನಲ್ಲಿ ಸಿಬ್ಬಂದಿಯ ವೈದ್ಯಕೀಯ ಕ್ಷಮತಾ ಪ್ರಮಾಣಪತ್ರ ಹಾಗೂ ಕೀಟ ನಿಯಂತ್ರಣ ಪ್ರಮಾಣಪತ್ರ ಇರಲಿಲ್ಲ. ಹಿರಿಯೂರಿನ ತಿಮ್ಮಣ್ಣ ಸ್ವೀಟ್ ಮ್ಯಾನುಫ್ಯಾಕ್ಚರರ್ ಘಟಕದಲ್ಲಿ ಸ್ವಚ್ಛತೆಯ ಕೊರತೆ ಮತ್ತು ಪರವಾನಗಿ ಇಲ್ಲದಿರುವುದು ಬೆಳಕಿಗೆ ಬಂದಿದೆ.

ರಾಜ್ಯಾದ್ಯಂತ ತಪಾಸಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com