

ದಾವಣಗೆರೆ: ವೇಗವಾಗಿ ಬಂದ ಕಾರೊಂದು ಸಿಎನ್ಜಿ ತುಂಬಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಹೊರವಲಯದ ಬಡಾ ಕ್ರಾಸ್ ಬಳಿ ನಡೆದಿದೆ.
ಮೃತಪಟ್ಟವನ್ನು ಸುಜನ್ (16) ಹಾಗೂ ರಾಮ್ ತೇಜಾ ರೆಡ್ಡಿ (17) ಎಂದು ಗುರ್ತಿಸಲಾಗಿದೆ. ಅಪಘಾತದಲ್ಲಿ ಸುಜನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ರಾಮ್ ತೇಜಾ ರೆಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿರುವ ಆದಿತ್ಯ (16)ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಮೃತ ಹಾಗೂ ಗಾಯಗೊಂಡ ವಿದ್ಯಾರ್ಥಿಗಳು ದಾವಣಗೆರೆಯ ಶಕ್ತಿ ನಗರ ಮತ್ತು ಜೆ.ಎಚ್. ಪಟೇಲ್ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ.
ಕಾರು ಬೆಂಗಳೂರಿನಿಂದ ದಾವಣಗೆರೆ ಕಡೆಗೆ ಬರುತ್ತಿದ್ದಾಗ ಬಡಾ ಕ್ರಾಸ್ ಸಮೀಪ ಸಿಎನ್ಜಿ ತುಂಬಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದ್ದು, ಅದರೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಹೆದ್ದಾರಿ ಗಸ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಈ ನಡುವೆ ಲಾರಿಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ವೀಡಿಯೋ ವೈರಲ್ ಆಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.