

ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ನ 2026 ರ ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಆಹ್ವಾನ ನೀಡಿದ್ದನ್ನು ವಿರೋಧಿಸಿ 105 ಪದವಿ ವಿದ್ಯಾರ್ಥಿಗಳು ಸಮಾರಂಭಕ್ಕೆ ಗೈರುಹಾಜರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು) ವಿಶ್ವವಿದ್ಯಾಲಯದ 2026ನೇ ಸಾಲಿನ 105 ಸಾಮಾನ್ಯ ಪದವೀಧರರು ಶನಿವಾರ ನಡೆದ ಘಟಿಕೋತ್ಸವಕ್ಕೆ ಗೈರಾಗಿದ್ದು, ಅವರ ಪದವಿಗಳನ್ನು ಗೈರುಹಾಜರಿಯಲ್ಲೇ ಪ್ರದಾನ ಮಾಡಲಾಯಿತು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವುದನ್ನು ವಿರೋಧಿಸಿ 2026ನೇ ಸಾಲಿನ ಪದವೀಧರರು ಹಾಗೂ ಪ್ರಸ್ತುತ ಮತ್ತು ಹಳೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ವಿಶ್ವವಿದ್ಯಾಲಯವು ಘಟಿಕೋತ್ಸವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಬಳಿಕ ಶನಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಈ ವರ್ಷದ ಘಟಿಕೋತ್ಸವ ನಡೆಯುವುದೇ ಎಂಬ ಬಗ್ಗೆ ಆರಂಭದಿಂದಲೂ ಅನಿಶ್ಚಿತತೆ ಇತ್ತು. ಅಕ್ಟೋಬರ್ 7ರಂದು ವಿಶ್ವವಿದ್ಯಾಲಯವು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನಟಿ ಅರುಂಧತಿ ನಾಗ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಪತ್ರವ್ಯವಹಾರದ ಮೂಲಕ ದೃಢಪಡಿಸಿತ್ತು, ಈ ಮೂಲಕ ಸಿಜೆಐ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವುದು ಸ್ಪಷ್ಟವಾಗಿತ್ತು.