

ಬೆಂಗಳೂರು: ರಾಜಧಾನಿ ಬೆಂಗಳೂರಿನ ಇಂದಿರಾನಗರದ 28 ವರ್ಷದ ಯುವತಿಯೊಬ್ಬರು, ತನ್ನನ್ನು ಮದ್ವೆಯಾಗಲು ಬಯಸಿದ್ದ ಬಾಯ್ಫ್ರೆಂಡ್ ಗೆ ಕಳುಹಿಸಿದ್ದ ಖಾಸಗಿ ಕ್ಷಣಗಳ ಹಾಗೂ ನಗ್ನ ಫೋಟೋಗಳನ್ನು ಪೋರ್ನ್ ವೆಬ್ ಸೈಟ್ಗೆ ಅಪ್ಲೋಡ್ ಮಾಡಿರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯುವತಿ, ತನ್ನ ಪ್ರಿಯಕರನ ಮೇಲಿನ ನಂಬಿಕೆಯಿಂದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನ ಸ್ನ್ಯಾಪ್ ಚಾಟ್ ಮೂಲಕ ಹಂಚಿಕೊಂಡಿದ್ದಳು. ಯುವತಿ ಕಳುಹಿಸಿದ ಖಾಸಗಿ ಹಾಗೂ ನಗ್ನ ಫೋಟೋಗಳು ಅಶ್ಲೀಲ ವೆಬ್ಸೈಟ್ನಲ್ಲಿ ಸೋರಿಕೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಿಡಿಗೇಡಿಗಳು ಯುವತಿಯ ಸ್ನ್ಯಾಪ್ಚಾಟ್ ಖಾತೆಯನ್ನು ಹ್ಯಾಕ್ ಮಾಡಿ ಫೋಟೋ ಮತ್ತು ವಿಡಿಯೋಗಳನ್ನು ಪಡೆದಿದ್ದಾರೆ. ನಂತರ ಆ ಅಸಭ್ಯ ದೃಶ್ಯಗಳನ್ನ ಪೋರ್ನ್ ವೆಬ್ಸೈಟ್ಗಳಲ್ಲಿ ಪ್ರಸಾರ ಮಾಡಿದ್ದಾರೆ.
ಪೋರ್ನ್ ವೆಬ್ ಸೈಟ್ನಲ್ಲಿ ತನ್ನದೇ ಖಾಸಗಿ ಫೋಟೋಗಳನ್ನು ನೋಡಿ ತೀವ್ರ ಮಾನಸಿಕ ಆಘಾತಕ್ಕೊಳಗಾದ ಯುವತಿ, ಧೃತಿಗೆಡದೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವೆಬ್ಸೈಟ್ನಿಂದ ತನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಕೂಡಲೇ ತೆಗೆದುಹಾಕುವಂತೆ ದೂರಿನಲ್ಲಿ ಮನವಿ ಮಾಡಿರುವ ಯುವತಿ, ಈ ಕೃತ್ಯ ಎಸಗಿರುವ ಸೈಬರ್ ವಂಚಕರನ್ನ ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸೈಬರ್ ಜಗತ್ತಿನಲ್ಲಿ ಇಂತಹ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಯುವತಿಯರು ತೀವ್ರ ಎಚ್ಚರಿಕೆ ವಹಿಸಬೇಕೆಂಬುದಕ್ಕೆ ಈ ಪ್ರಕರಣ ಪ್ರಮುಖ ಎಚ್ಚರಿಕೆಯಾಗಿದೆ.