ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರ ಸಿದ್ಧ, ಪ್ರತಿಭಟನೆ ಕೈಬಿಡಿ: ರೈತರಿಗೆ ಪ್ರಹ್ಲಾದ್ ಜೋಶಿ ಮನವಿ

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಅವರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಸೇರಿದಂತೆ ಕಬ್ಬು ಬೆಳೆಗಾರರು ಮುಂದಿಟ್ಟಿರುವ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸಮಿತಿ ಸಮಗ್ರವಾಗಿ ಪರಿಶೀಲಿಸಲಿದೆ.
Pralhad Joshi
ಪ್ರಹ್ಲಾದ್ ಜೋಶಿ
Updated on: 

ಹಾವೇರಿ: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಸಿದ್ಧವಿಸಿದ್ದು, ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ರೈತರ ಹಿತಾಸಕ್ತಿಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದ್ದಾರೆ.

ರೈತ ಮುಖಂಡರು ಮತ್ತೊಮ್ಮೆ ಮಾತುಕತೆಗೆ ಮುಂದೆ ಬಂದರೆ ಕೇಂದ್ರ ಸರ್ಕಾರ ಚರ್ಚೆ ನಡೆಸಲು ಸಿದ್ಧವಿದೆ. ಕೃಷಿ ತಜ್ಞ ರಮೇಶ್ ಚಂದ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ಶೀಘ್ರದಲ್ಲೇ ಅಧ್ಯಯನ ಆರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಅವರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಸೇರಿದಂತೆ ಕಬ್ಬು ಬೆಳೆಗಾರರು ಮುಂದಿಟ್ಟಿರುವ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಸಮಿತಿ ಸಮಗ್ರವಾಗಿ ಪರಿಶೀಲಿಸಲಿದೆ ಎಂದು ತಿಳಿಸಿದರು.

ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಾಗ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕಾಗುತ್ತದೆ. ಮಾತುಕತೆಯಲ್ಲಿ ಐದರಿಂದ ಆರು ಪ್ರಮುಖ ರೈತ ಪ್ರತಿನಿಧಿಗಳು ಭಾಗವಹಿಸಿದರೆ ಚರ್ಚೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದರು.

ಇದೇ ವೇಳೆ ಪ್ರತಿಭಟನೆಯ ಸಂದರ್ಭದಲ್ಲಿ ಕೆಲವರು ಮಾಡಿದ ಟೀಕೆಗಳನ್ನು ತಾವು ವೈಯಕ್ತಿಕವಾಗಿ ಪರಿಗಣಿಸುವುದಿಲ್ಲ ಎಂದ ಜೋಶಿ ಅವರು, ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ ಎಂದು ಹೇಳಿದರು.

Pralhad Joshi
ಮೋದಿ ಸರ್ಕಾರ ರೈತ ಪರ, ಹಬ್ಬದ ಸಮಯದಲ್ಲಿ ಪ್ರತಿಭಟನೆ ಮಾಡಬೇಡಿ, ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ: ಪ್ರಹ್ಲಾದ್ ಜೋಶಿ; Video

ದೇಶದ 10ರಿಂದ 11 ರಾಜ್ಯಗಳಲ್ಲಿ ಸಕ್ಕರೆ ಉತ್ಪಾದನೆಯಾಗುತ್ತಿದೆ. ಹೀಗಾಗಿ, ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಸಮಗ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. 2014ರಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಹೆಚ್ಚಾಗಿದೆ. ರೈತರು ಉತ್ಪಾದಿಸುವ ಪ್ರಮಾಣಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ಭತ್ತ ಮತ್ತು ಗೋಧಿಯನ್ನು ಖರೀದಿಸುತ್ತಿದೆ ಎಂದರು.

ಕಬ್ಬಿಗೆ ರಾಜ್ಯ ಸಲಹಾ ಬೆಲೆಯನ್ನು ತಕ್ಷಣ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಜೋಶಿ ಅವರು, ಈ ಸಂಬಂಧ 2025ರಲ್ಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾಗಿ ತಿಳಿಸಿದರು. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದು, ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ಹೇಳಿದರು.

ಎಥೆನಾಲ್ ಖರೀದಿಯನ್ನು ಹೆಚ್ಚಿಸುವ ಮೂಲಕ ಸಕ್ಕರೆ ಉದ್ಯಮಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಪ್ರಮುಖ ಎಥೆನಾಲ್ ಉತ್ಪಾದಕ ರಾಜ್ಯಗಳಾಗಿವೆ. ಕೇಂದ್ರ ಸರ್ಕಾರ ಎಥೆನಾಲ್ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದ್ದು, ಕರ್ನಾಟಕದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಮತ್ತು ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸದ ರೀತಿಯಲ್ಲಿ ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com