

ಮೈಸೂರು: ಮೈಸೂರು ದಸರಾ ಸಂಭ್ರಮದ ಮಧ್ಯೆ ವಿವಾದವೊಂದು ಸೃಷ್ಟಿಸಿಯಾಗಿದ್ದು, ಕೆ.ಆರ್ ನಗರ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ದೇಗುಲ ಆವರಣದ ಗೋಡೆ ಮೇಲೆ ಶಿಲುಬೆ ಮತ್ತು ಮಸೀದಿ ಚಿತ್ರಗಳು ಪತ್ತೆಯಾಗಿವೆ. ಹಸಿರು ಬಣ್ಣದಲ್ಲಿ ಮಸೀದಿ ಚಿತ್ರ ಹಾಗೂ ಕೆಂಪು ಬಣ್ಣದಲ್ಲಿ ಶಿಲುಬೆಯನ್ನು ಬಿಡಿಸಲಾಗಿದ್ದು ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇದರ ಬೆನ್ನಲ್ಲೇ ಅಧಿಕಾರಿಗಳು ಈ ಸಂಬಂಧ ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ದ ದೂರು ದಾಖಲಿಸಿದ್ದಾರೆ.
ವಿವಾದ ಬೆನ್ನಲ್ಲೇ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ. ಅರ್ಕೇಶ್ವರ ದೇವಸ್ಥಾನದ ನವೀಕರಣ ನಡೆಯುತ್ತಿದ್ದು, ಅಚಾನಕ್ಕಾಗಿ ಮಸೀದಿ ಮತ್ತು ಶಿಲುಬೆ ಚಿತ್ರವನ್ನು ದೇವಸ್ಥಾನದ ಮೇಲೆ ಬಿಡಿಸಲಾಗಿದೆ. ಕೂಡಲೇ ತೆಗೆಯುತ್ತಿರೋ, ನಾನೇ ಬಂದು ತೆಗೆಸಬೇಕೋ? ಎಂದಿದ್ದಾರೆ. ಅಲ್ಲದೇ ಮುಸಲ್ಮಾನರನ್ನು ದೂಷಿಸಬೇಡಿ. ಇದಕ್ಕೆ ಬೆರಕೆ ಹಿಂದೂಗಳೇ ಕಾರಣ ಎಂದು ಸಾಮಾಜಿಕ ತಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಘಟನೆ ಬೆನ್ನಲ್ಲೇ ತಹಶೀಲ್ದಾರ್ ಸುರೇಂದ್ರ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ದೇವಾಲಯ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ ಬಿಡಿಸಿರುವುದು ಕಂಡುಬಂದಿದೆ. ಹೀಗಾಗಿ ಇಬ್ಬರ ವಿರುದ್ದ ದೂರು ದಾಖಲಿಸಲಾಗಿದ್ದು ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ ಎಂದರು.