ಬೆಂಗಳೂರು: ಮಗಳ ವಿವಾಹಕ್ಕೂ ಬಾರದೆ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿ; ಆಂಧ್ರದಲ್ಲಿ ಬಂಧನ

2019ರ ನವೆಂಬರ್‌ನಲ್ಲಿ, ತನ್ನ ತಾಯಿಯ ಅನಾರೋಗ್ಯದ ಕಾರಣ ನೀಡಿ ಆತ 30 ದಿನಗಳ ಪರೋಲ್‌ಗೆ ಅರ್ಜಿ ಸಲ್ಲಿಸಿದ್ದನು. ಆದರೆ, ಪರೋಲ್ ಅವಧಿ ಮುಗಿದ ನಂತರವೂ ಆತ ಜೈಲಿಗೆ ಮರಳಲಿಲ್ಲ.
Narasimha Reddy
ನರಸಿಂಹ ರೆಡ್ಡಿ
Updated on: 

ಬೆಂಗಳೂರು: ಪರೋಲ್ ಅವಧಿ ಮುಗಿದ ನಂತರ ಜೈಲಿಗೆ ಮರಳದೆ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ 56 ವರ್ಷದ ಜೀವಾವಧಿ ಕೈದಿಯೊಬ್ಬನನ್ನು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಆಂಧ್ರಪ್ರದೇಶದ ಮೂಲದ ನರಸಿಂಹ ರೆಡ್ಡಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, 2013ರಲ್ಲಿ ಪಾವಗಡ ಪೊಲೀಸರು ನರಸಿಂಹ ರೆಡ್ಡಿ ಹಾಗೂ ಇತರ ನಾಲ್ವರನ್ನು ದರೋಡೆ ಮತ್ತು ಮನೆಯ ಮಾಲೀಕರೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ಕದ್ದ ಪ್ರಕರಣದಲ್ಲಿ ಬಂಧಿಸಿದ್ದರು. 2015ರಲ್ಲಿ ಮಧುಗಿರಿ ನ್ಯಾಯಾಲಯವು ಈ ಪ್ರಕರಣದಲ್ಲಿ ರೆಡ್ಡಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ನಂತರ ಆತನನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. 2019ರ ನವೆಂಬರ್‌ನಲ್ಲಿ, ತನ್ನ ತಾಯಿಯ ಅನಾರೋಗ್ಯದ ಕಾರಣ ನೀಡಿ ಆತ 30 ದಿನಗಳ ಪರೋಲ್‌ಗೆ ಅರ್ಜಿ ಸಲ್ಲಿಸಿದ್ದನು. ಆದರೆ, ಪರೋಲ್ ಅವಧಿ ಮುಗಿದ ನಂತರವೂ ಆತ ಜೈಲಿಗೆ ಮರಳಲಿಲ್ಲ. ಪೊಲೀಸರು ಆತನಿಗಾಗಿ ಹಲವು ಬಾರಿ ಶೋಧ ನಡೆಸಿದರೂ, ಆತನ ಸುಳಿವು ಸಿಕ್ಕಿರಲಿಲ್ಲ.

ಆತ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಿಸಿದ್ದರು.

Narasimha Reddy
ಕೈದಿ ಪತ್ನಿಯ ಮೇಲೆ ಕಣ್ಣು, ಸುಪ್ರೀಂ ಕೋರ್ಟ್ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿಗೆ ಮುಕ್ತಿ: ಜೈಲು ಡಿಐಜಿ ಸೋಮಶೇಖರ್ ಬಂಧನ ಕೇಸ್‌ಗೆ ಬಿಗ್ ಟ್ವಿಸ್ಟ್!

ಶುಕ್ರವಾರದಂದು, ರಸ್ತೆ ಅಪಘಾತವೊಂದರಲ್ಲಿ ಕಾಲಿಗೆ ಗಾಯವಾಗಿ (ಮೂಳೆ ಮುರಿದು), ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ವೈದ್ಯಕೀಯ ಚಿಕಿತ್ಸೆಯ ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದರು.

ಬಂಧನದಿಂದ ತಪ್ಪಿಸಿಕೊಳ್ಳಲು ಆತ ತನ್ನ ಹೆಸರನ್ನು 'ಶ್ರೀನಿವಾಸ ರೆಡ್ಡಿ' ಎಂದು ಬದಲಾಯಿಸಿಕೊಂಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆತ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ, ಆಧಾರ್ ಕಾರ್ಡ್ ಹೊಂದಿರಲಿಲ್ಲ ಮತ್ತು ತನ್ನ ಕುಟುಂಬದಿಂದಲೂ ದೂರವೇ ಉಳಿದಿದ್ದನು. ಅಷ್ಟೇ ಏಕೆ, ತನ್ನ ಮಗಳ ಮದುವೆಗೂ ಆತ ಹಾಜರಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com