

ಮೈಸೂರು: 11 ದಿನಗಳ ಕಾಲ ನಡೆದ ಮೈಸೂರು ದಸರಾ ಉತ್ಸವದ ಅಂತಿಮ ದಿನವಾದ ವಿಜಯದಶಮಿಯಂದು ಆಕರ್ಷಕ ಜಂಬೂ ಸವಾರಿಯನ್ನು ವೀಕ್ಷಿಸಲು ಹಲವಾರು ವಿದೇಶಿ ರಾಯಬಾರಿಗಳು ಅರಮನೆ ನಗರಿಗೆ ಆಗಮಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಈ ಗಣ್ಯರನ್ನು ಸ್ವಾಗತಿಸಿದರು ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಯುರೋಪಿಯನ್ ಒಕ್ಕೂಟದ ರಾಯಭಾರಿ ಜೀನ್-ಎರಿಕ್ ಪ್ಯಾಕ್ವೆಟ್, ಚೀನಾದ ರಾಯಭಾರಿ ಕ್ಸು ಫೀಹಾಂಗ್, ಭಾರತದಲ್ಲಿನ ಈಕ್ವೆಡಾರ್‌ನ ರಾಯಭಾರಿ ಫರ್ನಾಂಡೊ ಬುಚೆಲಿ, ಮೊಜಾಂಬಿಕ್‌ನ ಹೈ ಕಮಿಷನರ್ ಅರ್ಮಾಂಡೊ ಪೆಡ್ರೊ, ಬಲ್ಗೇರಿಯಾದ ರಾಯಭಾರಿ ನಿಕೋಲಾಯ್ ಯಾಂಕೋವ್ ಮತ್ತು ಬ್ರಿಟಿಷ್ ಉಪ ಹೈ ಕಮಿಷನರ್ ಹರ್ಷ್‌ಬೀರ್ ಸಂಘಾ ಅವರನ್ನು ಸ್ವಾಗತಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಇವರಲ್ಲದೆ, ಡೆನ್ಮಾರ್ಕ್‌ನ ಕಾನ್ಸುಲ್ ಜನರಲ್ ಪೀಟರ್ ವಿಂಥರ್, ಇಸ್ರೇಲ್‌ನ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್, ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಾಗೂ ಅರ್ಮೇನಿಯಾ ಗಣರಾಜ್ಯದ ರಾಯಭಾರ ಕಚೇರಿಯ ಕೌನ್ಸಿಲರ್ ಮರಾಟ್ ಮೆಲಿಕ್ಯಾನ್ ಕೂಡ ಉಪಸ್ಥಿತರಿದ್ದರು.
ಈ ವೇಳೆ ಸಚಿವ ರಾಯರೆಡ್ಡಿ, ಕರ್ನಾಟಕದ ಭವ್ಯ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಚರಣೆಗಳು, ಮೈಸೂರು ರಾಜಮನೆತನದ ಪರಂಪರೆ ಹಾಗೂ ಈ ಹಬ್ಬದ ಮಹತ್ವದ ಕುರಿತು ಅತಿಥಿಗಳಿಗೆ ಮಾಹಿತಿ ನೀಡಿದ್ದಾರೆ.
ದಸರಾ ಉತ್ಸವವು ಕಾಲಕ್ರಮೇಣ ಹೇಗೆ ಬೆಳೆದುಬಂದಿತು. ಅಧಿದೇವತೆ ಚಾಮುಂಡೇಶ್ವರಿ ದೇವಿಯ ಮೇಲೆ ಜನರಿಗಿರುವ ಭಕ್ತಿ, ಹಬ್ಬಕ್ಕಾಗಿ ಕೈಗೊಂಡ ಸಿದ್ಧತೆಗಳು, ಚಿನ್ನದ ಅಂಬಾರಿ ಮೆರವಣಿಗೆಯ ಮಹತ್ವ ಮತ್ತು ಈ ಉತ್ಸವದ ವಿಶಿಷ್ಟ ಲಕ್ಷಣಗಳ ಬಗ್ಗೆ ಅವರು ವಿವರಿಸಿದರು.
ಕರ್ನಾಟಕದ ಪರಂಪರೆ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಈ ವಾರ್ಷಿಕ ಕಾರ್ಯಕ್ರಮದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವದ ಕುರಿತು ಸಚಿವರು ಸಮಗ್ರ ಮಾಹಿತಿ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.