

ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಬಾಂಬ್ ಸ್ಫೋಟ ಸಂಭವಿಸಿರುವುದನ್ನು ತೋರಿಸುವ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ವಿಡಿಯೊವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಬಿಹಾರ ಮೂಲದ ಕಾರ್ಮಿಕನನ್ನು ಬಂಧಿಸಿದ್ದಾರೆ. ಅಲಿ ಎಂದು ಗುರುತಿಸಲಾದ ಈ ವ್ಯಕ್ತಿ ಆರಂಭದಲ್ಲಿ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ. ಬಳಿಕ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಟ್ರಿಗರ್ ಒತ್ತುವಂತೆ ಸನ್ನೆ ಮಾಡುವುದು ಕಂಡುಬರುತ್ತದೆ. ಬಳಿಕ ಸ್ಫೋಟ ಸಂಭವಿಸಿ ವಿಧಾನಸೌಧದ ಕಟ್ಟಡ ಧ್ವಂಸವಾಗುವುದನ್ನು ತೋರಿಸಲಾಗಿದೆ. ಅಕ್ಟೋಬರ್ 20ರಂದು ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಈ ವಿಡಿಯೊವನ್ನು ‘Jnx king Hg’ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಸದ್ಯ ಈ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ವಿಡಿಯೊದ ಶೀರ್ಷಿಕೆಯಲ್ಲಿ ತಾನು ವಿಧಾನಸೌಧವನ್ನು ಸ್ಫೋಟಿಸಿರುವುದಾಗಿ ಅಲಿ ಹೇಳಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಎಐ ಬಳಸಿ ಸೃಷ್ಟಿಸಲಾದ ಈ ನಕಲಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಹಲವರು ಪೊಲೀಸರನ್ನು ಟ್ಯಾಗ್ ಮಾಡಿ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಳಿಕ ವಿಡಿಯೊ ಸೃಷ್ಟಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಆಲಿಯನ್ನು ಬಂಧಿಸಿದರು.
ವಿಧಾನಸೌಧದಲ್ಲಿ ಯಾವುದೇ ನೈಜ ಸ್ಫೋಟ ಸಂಭವಿಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಪ್ರಥಮ ಮಾಹಿತಿ ವರದಿ (DIR) ದಾಖಲಿಸಲಾಗಿದೆ.
ಆರೋಪಿಯ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆದರಿಕೆ ಹುಟ್ಟಿಸುವ ವಿಷಯಗಳು ಅಥವಾ ದೃಶ್ಯಗಳನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ವ್ಯಾಪಕ ಆತಂಕ ಉಂಟುಮಾಡುವ ಉದ್ದೇಶಕ್ಕೆ ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.