ಮಧ್ಯಪ್ರಾಚ್ಯ ಉದ್ವಿಗ್ನತೆ ಎಫೆಕ್ಟ್: ಸೌದಿ ಅರೇಬಿಯಾದಲ್ಲಿ ಕರ್ನಾಟಕದ 500ಕ್ಕೂ ಹೆಚ್ಚು ಯಾತ್ರಿಕರು ಸಂಕಷ್ಟದಲ್ಲಿ, ರಕ್ಷಣೆಗೆ ಸರ್ಕಾರ ಕಸರತ್ತು..!

ಸೌದಿ ರಿಯಾಲ್‌ಗೆ ಹೋಲಿಸಿದರೆ ಭಾರತೀಯ ರೂಪಾಯಿಯ ವಿನಿಮಯ ಮೌಲ್ಯ ಕಡಿಮೆ ಇರುವುದರಿಂದ ಒಬ್ಬರಿಗೆ ದಿನಕ್ಕೆ ಊಟಕ್ಕಾಗಿ ಸುಮಾರು 1,500 ರೂಪಾಯಿ ಖರ್ಚಾಗುತ್ತಿದೆ. ಅಗತ್ಯಬಿದ್ದರೆ ಆಹಾರದ ವ್ಯವಸ್ಥೆ ಮಾಡುತ್ತೇವೆ.
File photo
ಸಂಗ್ರಹ ಚಿತ್ರ
Updated on: 

ರಿಯಾದ್/ಬೆಂಗಳೂರು: ಪ್ರಾದೇಶಿಕ ಉದ್ವಿಗ್ನತೆ ಹಾಗೂ ವಿಮಾನ ಕಾರ್ಯಾಚರಣೆಯಲ್ಲಾದ ಭಾರಿ ವ್ಯತ್ಯಯದಿಂದಾಗಿ ಸೌದಿ ಅರೇಬಿಯಾದಲ್ಲಿ ಕರಾವಳಿ ಕರ್ನಾಟಕ ಹಾಗೂ ನೆರೆಯ ಕಾಸರಗೋಡಿನ 500ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಸಂಕಷ್ಟದಲ್ಲಿರುವ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸ್ಥಳೀಯ ಟೂರ್ ಆಪರೇಟರ್‌ಗಳು ಮತ್ತು ರಾಜಕೀಯ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತುರ್ತು ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ.

ಯಾತ್ರಿಕರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಹಜ್ ಸಮಿತಿಯ ಅಧ್ಯಕ್ಷರು ಮತ್ತು ಇತರ ಅಧಿಕಾರಿಗಳು ಇಂದು ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಯಾತ್ರಿಕರನ್ನು ಭೇಟಿಯಾಗಿ ನೆರವು ನೀಡುವ ಭರವಸೆ ನೀಡಿದ್ದಾರೆ.

ಸೌದಿ ರಿಯಾಲ್‌ಗೆ ಹೋಲಿಸಿದರೆ ಭಾರತೀಯ ರೂಪಾಯಿಯ ವಿನಿಮಯ ಮೌಲ್ಯ ಕಡಿಮೆ ಇರುವುದರಿಂದ ಒಬ್ಬರಿಗೆ ದಿನಕ್ಕೆ ಊಟಕ್ಕಾಗಿ ಸುಮಾರು 1,500 ರೂಪಾಯಿ ಖರ್ಚಾಗುತ್ತಿದೆ. ಅಗತ್ಯಬಿದ್ದರೆ ಆಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇತರ ನೆರವಿನ ಅಗತ್ಯವಿರುವ ಯಾತ್ರಿಕರಿಗಾಗಿ ಸಹಾಯವಾಣಿಯನ್ನೂ ಆರಂಭಿಸಲಾಗುತ್ತಿದೆ. ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಇಂಡಿಗೊ, ಆಕಾಶ ಏರ್ ಮತ್ತು ಏರ್ ಇಂಡಿಯಾ ವಿಮಾನಗಳಲ್ಲಿ ಯಾತ್ರಿಕರು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಆದರೆ, ಅಲ್ಲಿಗೆ ತಲುಪಿದ ಬಳಿಕ ಏಜೆಂಟರು ಅವರನ್ನು ಅತಂತ್ರ ಸ್ಥಿತಿಯಲ್ಲಿ ಬಿಟ್ಟು ತೆರಳಿದ್ದಾರೆ. ಅಕ್ಟೋಬರ್ 24 ಮತ್ತು 27ರಂದು ವಿಮಾನಗಳ ಮೂಲಕ ಯಾತ್ರಿಕರನ್ನು ವಾಪಸ್ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

File photo
ಸೌದಿ ಅರೇಬಿಯಾದಲ್ಲಿ ಸಿಲುಕಿರುವ 4,000 ಭಾರತೀಯ ಉಮ್ರಾ ಯಾತ್ರಾರ್ಥಿಗಳು: ತಕ್ಷಣವೇ ಕರೆತರಲು ಕೇಂದ್ರ ಸರ್ಕಾರಕ್ಕೆ ಓವೈಸಿ ಒತ್ತಾಯ!

ಯಾತ್ರಿಕರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಸುಮಾರು 500 ಮಂದಿಯನ್ನು ತಾಯ್ನಾಡಿಗೆ ಕರೆತರಲು ರಿಯಾದ್ ಅಥವಾ ಜೆದ್ದಾಕ್ಕೆ ವಿಮಾನಗಳನ್ನು ಹಾರಿಸಲು ಇಂಡಿಗೊ, ಆಕಾಶ ಏರ್ ಮತ್ತು ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಮ್ ಮಾತನಾಡಿ, ಯಾತ್ರಿಕರನ್ನು ಸುರಕ್ಷಿತವಾಗಿ ಮತ್ತು ಸಾಧ್ಯವಾದಷ್ಟು ಬೇಗ ಕರ್ನಾಟಕಕ್ಕೆ ವಾಪಸ್ ಕರೆತರಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಹಜ್ ನಿರ್ವಾಹಕರ ಸಂಘದ ಅಧ್ಯಕ್ಷ ಇಕ್ಬಾಲ್ ಸಿದ್ದೀಕಿ ಮಾತನಾಡಿ, ವಿಮಾನ ಟಿಕೆಟ್‌ಗಳು ರದ್ದಾಗಿರುವವರಿಗೆ ಮರುಪಾವತಿ ದೊರೆಯುವಂತೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ಇದರಿಂದ ಅವರು ಹೊಸ ಟಿಕೆಟ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಕಡಿಮೆ ವೆಚ್ಚದ ಪ್ರವಾಸ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಂಡಿರುವ ಹಲವು ಯಾತ್ರಿಕರ ವಿಮಾನ ಟಿಕೆಟ್‌ಗಳಿಗೆ ಮರುಪಾವತಿ ಸಿಗದಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಟಿಕೆಟ್‌ಗಳನ್ನು ಖರೀದಿಸಲು ಹಣಕಾಸಿನ ತೊಂದರೆ ಎದುರಾಗಿರುವುದರಿಂದ ಅನೇಕ ಯಾತ್ರಿಕರು ಸಂಕಷ್ಟದಲ್ಲಿದ್ದಾರೆ. ವಾಪಸ್ ಬರಲು ಮತ್ತೆ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com