ಮೇಕೆದಾಟು ಯೋಜನೆಗೆ ಶೀಘ್ರ ಕ್ಲಿಯರೆನ್ಸ್ ನೀಡಿ: ಕೇಂದ್ರ ಸರ್ಕಾರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ

ಪ್ರಸ್ತಾವಿತ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಶೀಘ್ರವೇ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕಸ್ತೂರಿರಂಗನ್ ವರದಿ ಹಾಗೂ ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
DK Shivakumar
ಡಿ.ಕೆ. ಶಿವಕುಮಾರ್
Updated on: 

ಬೆಂಗಳೂರು: ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ವನ್ಯಜೀವಿ ಹಾಗೂ ಪರಿಸರ ಇಲಾಖೆಯ ಅನುಮತಿಗಳ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಗುರುವಾರ ಭೇಟಿ ಮಾಡಿದ ಅವರು, ಮೇಕೆದಾಟು ಯೋಜನೆಗೆ ಅಗತ್ಯವಿರುವ ಅನುಮತಿಗಳನ್ನು ನೀಡುವಂತೆ ಒತ್ತಾಯಿಸಿದರು.

ದೆಹಲಿಯ ಪರ್ಯಾವರಣ ಭವನದಲ್ಲಿ ನಡೆದ ಈ ಪ್ರಮುಖ ಸಭೆಯಲ್ಲಿ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿಯು ಈ ಪ್ರಸ್ತಾವನೆಗೆ ತಕ್ಷಣವೇ ಒಪ್ಪಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಭೂಪೇಂದ್ರ ಯಾದವ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಸ್ತಾವಿತ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಶೀಘ್ರವೇ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಕಸ್ತೂರಿರಂಗನ್ ವರದಿ ಹಾಗೂ ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿರುವುದಾಗಿ ಎಂದು ಹೇಳಿದರು.

ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಸಭೆಯ ದಿನಾಂಕವನ್ನು ಅಂತಿಮಗೊಳಿಸುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಮಹದಾಯಿ ವಿವಾದದ ಕುರಿತು ಮಾತನಾಡಿದ ಅವರು, ಕಾನೂನು ದೃಷ್ಟಿಕೋನದಿಂದ ಕರ್ನಾಟಕದ ನಿಲುವನ್ನು ಕೇಂದ್ರ ಸಚಿವರಿಗೆ ವಿವರಿಸಿದ್ದೇನೆ. ಈ ಸಂಬಂಧ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಈ ವಿವಾದದ ಕುರಿತು ಚರ್ಚಿಸಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಹೇಳಿದರು.

ಈ ಹಿಂದೆ ಅವರು ನನ್ನನ್ನು ಮುಖ್ಯಮಂತ್ರಿಯಾಗಿ ಗುರುತಿಸಲು ಸಿದ್ಧರಿರಲಿಲ್ಲ. ಆದರೆ, ಈಗ ಗೌರವಾನ್ವಿತ ಮುಖ್ಯಮಂತ್ರಿ ಎಂದು ಸಂಬೋಧಿಸಿ ಪತ್ರ ಬರೆದಿದ್ದಾರೆ. ನಾನು ಇನ್ನೂ ಆ ಪತ್ರವನ್ನು ಓದಿಲ್ಲ. ಅದನ್ನು ನೋಡಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇನೆ” ಎಂದರು.

ಇದೇ ವೇಳೆ ಮೈಸೂರು ದಸರಾ ಆಯೋಜನೆ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನ ಸರ್ಕಾರ ಯಶಸ್ವಿಯಾಗಿ ಮೈಸೂರು ದಸರಾ ಆಯೋಜಿಸಿರುವುದನ್ನು ರಾಜ್ಯ ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಯಾವುದಾದರೂ ಒಂದು ವಿಷಯವನ್ನು ಮುಂದಿಟ್ಟುಕೊಂಡು ಮಾತನಾಡಬೇಕಿದೆ ಎಂದು ಹೇಳಿದರು.

DK Shivakumar
ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ನಂದಿಧ್ವಜ ಪೂಜೆಯ ಸ್ಥಳಕ್ಕೆ ಸಚಿವರಾದ ಎಚ್.ಸಿ. ಬಾಲಕೃಷ್ಣ, ನರೇಂದ್ರಸ್ವಾಮಿ ಮತ್ತು ಬಸವಂತಪ್ಪ ಅವರನ್ನು ಪೊಲೀಸರು ಪ್ರವೇಶಿಸದಂತೆ ತಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ದೇವಸ್ಥಾನದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹಾಗಿದ್ದರೆ, ಬಿಜೆಪಿ ನಾಯಕರು ಆ ಸಮಯದಲ್ಲಿ ಈ ವಿಚಾರವನ್ನು ಏಕೆ ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದರು.

ಇದೇ ವೇಳೆ ನಂದಿಧ್ವಜದ ಕಡೆಗೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಹೊಸದಾಗಿ ನೇಮಕಗೊಂಡ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿದ್ದರು ಎಂಬುದನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡರು.

ಅಲ್ಲಿ ಮಾಡಲಾಗಿದ್ದ ವ್ಯವಸ್ಥೆಗಳ ಬಗ್ಗೆ ಸಚಿವರಿಗೆ ಮಾಹಿತಿ ಇಲ್ಲದಿರಬಹುದು. ಸಚಿವರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡುವಂತೆ ನಾನು ಖುದ್ದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದರು.

ರಾಜಮನೆತನಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರ ಶಿಷ್ಟಾಚಾರವನ್ನು ಪಾಲಿಸಿದೆ. ಬಿಜೆಪಿ ಸಂಸದರ ಛಾಯಾಚಿತ್ರವನ್ನೂ ಪ್ರಮುಖವಾಗಿ ಪ್ರದರ್ಶಿಸಲಾಗಿತ್ತು. ನಾವು ರಾಜಮನೆತನಕ್ಕೆ ಗೌರವ ಮತ್ತು ಮರ್ಯಾದೆ ನೀಡಿದ್ದೇವೆ. ಈ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ? ನಾವು ಹೊಸದನ್ನು ಪರಿಚಯಿಸಲು ಬಯಸುತ್ತೇವೆ. ಬದಲಾವಣೆ ತರುವವರು ನಾವೇ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ನಮ್ಮ ಸಚಿವರನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದರು.

ನಿಗಮ ಮತ್ತು ಮಂಡಳಿಗಳ ನಿರ್ದೇಶಕರ ಪಟ್ಟಿಯನ್ನು ಅಂತಿಮಗೊಳಿಸಿ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗಿದೆ. ಸುಮಾರು 500 ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು, ಹೊಸಬರಿಗೆ ಅವಕಾಶ ನೀಡಬೇಕು ಎಂದು ತಾನು ಒತ್ತಾಯಿಸಿರುವುದಾಗಿ ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಸಚಿವ ಸಂಪುಟದಲ್ಲಿನ ಎರಡು ಖಾಲಿ ಸ್ಥಾನಗಳ ಭರ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಂಡು ಶೀಘ್ರವೇ ರಾಜ್ಯ ನಾಯಕತ್ವಕ್ಕೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com