ಮಹಿಳೆ ಕತ್ತು ಸೀಳಿದ ಮಾಂಜಾದಾರ: ಅಂಗಡಿಗಳ ಮೇಲೆ ಹುಬ್ಬಳ್ಳಿ ಪೊಲೀಸರ ದಾಳಿ, ಅಪಾರ ಪ್ರಮಾಣದ ದಾರ ವಶಕ್ಕೆ! Video

ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಮೃತಪಟ್ಟ ಘಟನೆ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
Police seized manja string during inspections at shops in Bhusappa Chowk
ಅಂಗಡಿಗಳ ಮೇಲೆ ಹುಬ್ಬಳ್ಳಿ ಪೊಲೀಸರ ದಾಳಿ, ಮಾಂಜಾ ದಾರ ವಶಕ್ಕೆ
Updated on: 

ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿ ಲೇಪಿತ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 38 ವರ್ಷದ ಮಹಿಳೆ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಇದರ ಬೆನ್ನಲ್ಲೇ ಮಾಂಜಾದಾರ ಮಾರಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಹುಬ್ಬಳ್ಳಿ ನಗರದ ಭುಸಪ್ಪ ಚೌಕ್‌ನಲ್ಲಿರುವ ಮೂರು ಅಂಗಡಿಗಳಲ್ಲಿ ಗುರುವಾರ ತಪಾಸಣೆ ನಡೆಸಿದ ಪೊಲೀಸರು, ಎರಡು ರಟ್ಟಿನ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಮಾಂಜಾ ದಾರವನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ್, ಭುಸಪ್ಪ ಚೌಕ್‌ನ ಮೂರು ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಎರಡು ಅಂಗಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಮಾಂಜಾ ದಾರವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಮೃತಪಟ್ಟ ಘಟನೆ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಅಪಾಯಕಾರಿ ದಾರದ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಂಗಡಿಗಳ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.

Police seized manja string during inspections at shops in Bhusappa Chowk
ಶಿವಮೊಗ್ಗ: KSOU ಪರೀಕ್ಷೆಯಲ್ಲಿ ಸಾಮೂಹಿಕ ನಕಲು; ವಿದ್ಯಾರ್ಥಿಗಳಿಂದ ಹಣ ಪಡೆದು ಮೊಬೈಲ್‌, ಪುಸ್ತಕ ಬಳಸಿ ಎಕ್ಸಾಂ ಬರೆಯಲು ಅವಕಾಶ?

ಮಾಂಜಾ ದಾರ ಬಳಕೆ ಮಾಡಿದರೆ FIR ದಾಖಲು

ಮಹಿಳೆಯ ಸಾವಿನ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮಾಂಜಾ ದಾರ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. “ಇದು ಅತ್ಯಂತ ಗಂಭೀರ ಅಪರಾಧ. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ವಿದ್ಯಾರ್ಥಿಗಳಾಗಲಿ ಅಥವಾ ಇನ್ಯಾರೇ ಆಗಲಿ, ಮಾಂಜಾ ದಾರ ಬಳಸಿ ಗಾಳಿಪಟ ಹಾರಿಸುವುದು ಕಂಡುಬಂದರೆ ಯಾವುದೇ ತಾರತಮ್ಯವಿಲ್ಲದೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಂಜಾ ದಾರದಿಂದ ಉಂಟಾಗುವ ಅಪಾಯಗಳ ಬಗ್ಗೆ ಹುಬ್ಬಳ್ಳಿ-ಧಾರವಾಡದ ಜನರು ಜಾಗೃತರಾಗಬೇಕು. ಅಪಾಯಕಾರಿ ದಾರದ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಕ್ಷಣದ ನಿರ್ಲಕ್ಷ್ಯದಿಂದ ಅಮೂಲ್ಯವಾದ ಮಾನವ ಜೀವವೊಂದು ಕಳೆದುಹೋಗಬಾರದು. ಹೀಗಾಗಿ ಮಾಂಜಾ ದಾರ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಕೆಲಸಕ್ಕೆ ತೆರಳುತ್ತಿದ್ದಾಗ ಕುತ್ತಿಗೆಗೆ ಸಿಲುಕಿದ ಮಾಂಜಾ ದಾರ

ಗುರುವಾರ ಮಧ್ಯಾಹ್ನ ಹುಬ್ಬಳ್ಳಿಯ ಶಿವಶಂಕರ ಕಾಲನಿ ಸಮೀಪ ಸಂಭವಿಸಿದ ಈ ದುರಂತದಲ್ಲಿ 38 ವರ್ಷದ ಲ್ಯಾಬ್ ಟೆಕ್ನಿಷಿಯನ್ ವಿದ್ಯಾ ಮಂಜುನಾಥ್ ಗೌಡರ್ ಮೃತಪಟ್ಟಿದ್ದಾರೆ. ಅವರು ಹುಬ್ಬಳ್ಳಿಯ ಭಾರತ್ ನಗರದ ನಿವಾಸಿಯಾಗಿದ್ದರು. ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ವಿದ್ಯಾ ಅವರು ಮನೆಯಿಂದ ತಾವು ಕೆಲಸ ಮಾಡುತ್ತಿದ್ದ ಪ್ರಯೋಗಾಲಯಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಶಿವಶಂಕರ ಕಾಲನಿ ಬಳಿ ಹರಿತವಾದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಲುಕಿದೆ ಎನ್ನಲಾಗಿದೆ. ಗಾಜಿನ ಪುಡಿ ಲೇಪಿತವಾಗಿದ್ದ ದಾರದಿಂದ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಭಾರಿ ರಕ್ತಸ್ರಾವವಾಗಿದೆ.

ಗಾಯದ ತೀವ್ರತೆಯಿಂದ ಸ್ಕೂಟರ್ ಮೇಲಿನ ನಿಯಂತ್ರಣ ಕಳೆದುಕೊಂಡ ವಿದ್ಯಾ ರಸ್ತೆಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವಿದ್ಯಾ ಅವರ ಅಕಾಲಿಕ ಸಾವು ಕುಟುಂಬದವರನ್ನು ತೀವ್ರ ದುಃಖಕ್ಕೆ ತಳ್ಳಿದೆ. ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿ ಲೇಪಿತ ದಾರ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಮತ್ತೊಂದು ನಿದರ್ಶನವಾಗಿದೆ.

ಓಲ್ಡ್ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಓಲ್ಡ್ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಹಿಳೆಯ ಸಾವಿಗೆ ಕಾರಣವಾದ ಮಾಂಜಾ ದಾರವನ್ನು ಬಳಸಿದ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮಾಂಜಾ ದಾರ ಬಳಕೆಯಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುವ ಹಿನ್ನೆಲೆಯಲ್ಲಿ ಇಂತಹ ದಾರವನ್ನು ಬಳಸುವುದರಿಂದ ದೂರವಿರಬೇಕು ಎಂದು ಪೊಲೀಸರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com