

ಬೆಂಗಳೂರು: ಭಾರತದ ಎರಡನೇ 'ವಂದೇ ಭಾರತ್ ಸ್ಲೀಪರ್' ರೈಲು ಸೇವೆಯಾದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ನವೆಂಬರ್ 1 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ತಿಳಿಸಿದ್ದಾರೆ.
ಈ ಸೇವೆಯಿಂದಾಗಿ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯವು ಸುಮಾರು 24 ಗಂಟೆಗಳಿಂದ 16 ಗಂಟೆಗಳಿಗೆ ಇಳಿಕೆಯಾಗಲಿದ್ದು, ಆರು ರಿಂದ ಎಂಟು ಗಂಟೆಗಳಷ್ಟು ಸಮಯ ಉಳಿತಾಯವಾಗಲಿದೆ ಎಂದು ಸೋಮಣ್ಣ ಹೇಳಿದರು. ಈ ರೈಲಿನಲ್ಲಿ 16 ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳಿದ್ದು, ಒಟ್ಟು 823 ಬರ್ತ್‌ಗಳ (ಮಲಗುವ ವ್ಯವಸ್ಥೆ) ಸೌಲಭ್ಯವಿರುತ್ತದೆ. ಇದು ಎರಡೂ ನಗರಗಳ ನಡುವೆ ರಾತ್ರಿ ಪ್ರಯಾಣಕ್ಕೆ ಅನುಕೂಲ ಒದಗಿಸಲಿದೆ ಎಂದು ಅವರು ವಿವರಿಸಿದರು.
ಈ ರೈಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಚರಿಸಲಿದ್ದು, ವಾರದಲ್ಲಿ ಆರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನಿಂದ ಸಂಜೆ 7.50 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.55 ಕ್ಕೆ ಮುಂಬೈ ತಲುಪಲಿದೆ. ಈ ಪ್ರಯಾಣಕ್ಕೆ ಸುಮಾರು 16 ಗಂಟೆ 5 ನಿಮಿಷಗಳು ಬೇಕಾಗುತ್ತವೆ.
ಮರಳುವ ಪ್ರಯಾಣದಲ್ಲಿ, ಈ ರೈಲು ಮುಂಬೈನಿಂದ ರಾತ್ರಿ 8.10 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.55 ಕ್ಕೆ ಬೆಂಗಳೂರು ತಲುಪಲಿದೆ. ಈ ಪ್ರಯಾಣಕ್ಕೆ ಸುಮಾರು 15 ಗಂಟೆ 45 ನಿಮಿಷಗಳು ತಗಲಲಿವೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.