ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ: ಕೇಂದ್ರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಮನವಿ

"ಅಗತ್ಯವಿರುವ ಕಡೆಗಳಲ್ಲಿ ಸಚಿವಾಲಯವು ವಿಶೇಷ ವಿಮಾನಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು. ಯಾತ್ರಿಕರು ಸುರಕ್ಷಿತವಾಗಿ ಹಿಂತಿರುಗುವವರೆಗೂ ಅವರಿಗೆ ಅಗತ್ಯವಿರುವ ಎಲ್ಲರೀತಿಯ ನೆರವನ್ನು ನೀಡಬೇಕು" ಎಂದು ಕೋರಿದ್ದಾರೆ.
CM D K Shivakumar
ಸಿಎಂ ಡಿ ಕೆ ಶಿವಕುಮಾರ್ online desk
Updated on: 

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳ ಭದ್ರತಾ ಬಿಕ್ಕಟ್ಟು ಹಾಗೂ ಅದರಿಂದ ಉಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಿಲುಕಿರುವ ಕರ್ನಾಟಕದ 600ಕ್ಕೂ ಅಧಿಕ ಉಮ್ರಾ ಯಾತ್ರಿಕರನ್ನು ಸುರಕ್ಷಿತವಾಗಿ ಶೀಘ್ರವೇ ರಾಜ್ಯಕ್ಕೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ಶಿವಕುಮಾರ್ ಅವರು ಶುಕ್ರವಾರ ಪತ್ರ ಬರೆದಿದ್ದಾರೆ.

"ಅಲ್ಲಿನ ಸರ್ಕಾರವು ಬೆಂಗಳೂರು ಹಾಗೂ ಭಾರತದ ಇತರ ಭಾಗಗಳಿಗೆ ಹಿಂದಿರುಗಬೇಕಿದ್ದ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ, ಕರ್ನಾಟಕದ ಉಮ್ರಾ ಯಾತ್ರೆ ಕೈಗೊಂಡಿದ್ದ 600ಕ್ಕೂ ಹೆಚ್ಚು ಯಾತ್ರಿಕರು ಮೆಕ್ಕಾ ಹಾಗೂ ಮದೀನಾದಲ್ಲಿ ಅತಂತ್ರರಾಗಿದ್ದಾರೆ" ಎಂದು ತಿಳಿಸಿದ್ದಾರೆ.

"ಇತ್ತೀಚೆಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಹಾಗೂ ಅವರ ತಂಡವು ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು, ಯಾತ್ರಿಕರು ವಿಮಾನ ಸೇವೆಗಳ ವ್ಯತ್ಯಯದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವುದ್ದಲ್ಲದೇ, ಅನೇಕರ ಬಳಿ ಹಣವೂ ಖಾಲಿಯಾಗಿದೆ. ಆಹಾರ ಮತ್ತು ವಸತಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ" ಎಂದು ವಿವರಿಸಿದ್ದಾರೆ.

"ಹೋಟೆಲ್‌ ಮಾಲೀಕರು ಯಾತ್ರಿಕರಿಗೆ ಕೊಠಡಿಗಳನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದು, ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ದಿಕ್ಕು ತೋಚದಂತಾಗಿದೆ. ಸ್ಥಳೀಯ ಭಾರತೀಯ ಹಾಗೂ ಕರ್ನಾಟಕದ ಸ್ವಯಂಸೇವಾ ಸಂಸ್ಥೆಗಳು ನಿರಾಶ್ರಿತರಿಗೆ ತಾತ್ಕಾಲಿಕ ನೆರವು ನೀಡುತ್ತಿದೆ. ಆದರೆ ಅವು ಎಲ್ಲರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.

CM D K Shivakumar
ಮಧ್ಯಪ್ರಾಚ್ಯ ಉದ್ವಿಗ್ನತೆ ಎಫೆಕ್ಟ್: ಸೌದಿ ಅರೇಬಿಯಾದಲ್ಲಿ ಕರ್ನಾಟಕದ 500ಕ್ಕೂ ಹೆಚ್ಚು ಯಾತ್ರಿಕರು ಸಂಕಷ್ಟದಲ್ಲಿ; ರಕ್ಷಣೆಗೆ ಸರ್ಕಾರ ಕಸರತ್ತು..!

'"ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ ಜನರ ಬಗ್ಗೆ ಮಾನವೀಯತೆ ದೃಷ್ಟಿಯಿಂದ ರಿಯಾಧ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಸೌದಿ ಅರೇಬಿಯಾ ಅಧಿಕಾರಿಗಳು, ವಿಮಾನಯಾನ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಿ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ತಾವು ತುರ್ತು ವ್ಯವಸ್ಥೆ ಕಲ್ಪಿಸಬೇಕು" ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧ

"ಅಗತ್ಯವಿರುವ ಕಡೆಗಳಲ್ಲಿ ಸಚಿವಾಲಯವು ವಿಶೇಷ ವಿಮಾನಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು. ಯಾತ್ರಿಕರು ಸುರಕ್ಷಿತವಾಗಿ ಹಿಂತಿರುಗುವವರೆಗೂ ಅವರಿಗೆ ಅಗತ್ಯವಿರುವ ಎಲ್ಲರೀತಿಯ ನೆರವನ್ನು ನೀಡಬೇಕು" ಎಂದು ಕೋರಿದ್ದಾರೆ.

'"ಇದು ಅತ್ಯಂತ ಗಂಭೀರ ವಿಷಯವಾಗಿರುವುದರಿಂದ ಇದಕ್ಕೆ ಆದ್ಯತೆಯ ಮೇರೆಗೆ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾತ್ರಿಕರ ಸುರಕ್ಷಿತ ಮತ್ತು ಶೀಘ್ರ ವಾಪಸಾತಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com