KPSC ಹಗರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯ ಸರ್ಕಾರ ಅನುಮತಿ..!

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಕಲಂ 218ರ ಅಡಿಯಲ್ಲಿ ಕಡತ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
IAS officer Gyanendra Kumar Gangwar
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್
Updated on: 

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಶನಿವಾರ ಈ ಕುರಿತು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಕಲಂ 218ರ ಅಡಿಯಲ್ಲಿ ಕಡತ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೆಪಿಎಸ್‌ಸಿ ಮೂಲಕ ಪಶುವೈದ್ಯಾಧಿಕಾರಿ ಹಾಗೂ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.), ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಬಂಧಿಸಿತ್ತು.

IAS officer Gyanendra Kumar Gangwar
KPSC ಆಕಾಂಕ್ಷಿಗಳಿಗೆ ಬಿಗ್ ಶಾಕ್: ಹೈಕೋರ್ಟ್ ಆದೇಶ ಬೆನ್ನಲ್ಲೇ ವಿವಿಧ ಹುದ್ದೆಗಳ ನೇಮಕಾತಿಗೆ ಬ್ರೇಕ್

ಬಂಧನದ ಬಳಿಕ ಅವರು ತಮ್ಮ ಹುದ್ದೆಯಿಂದ ಅಮಾನತುಗೊಂಡಿದ್ದರು. 14 ದಿನಗಳ ಕಸ್ಟಡಿ ಅವಧಿ ಮುಗಿದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಗಂಗ್ವಾರ್ ಮತ್ತು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ನಡುವೆ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಪಿತೂರಿ ನಡೆದಿತ್ತು ಎಂಬ ಆರೋಪವಿದೆ. ಸೋರಿಕೆಯ ಮೂಲಕ ಪರೀಕ್ಷಾ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕನ್ನಾಳೆ 1.50 ಕೋಟಿ ರೂಪಾಯಿ ಲಂಚವನ್ನು ಮುಂಗಡವಾಗಿ ಸಂಗ್ರಹಿಸಿದ್ದರೆಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಪೈಕಿ 1.30 ಕೋಟಿ ರೂಪಾಯಿಯನ್ನು ಗಂಗ್ವಾರ್‌ಗೆ ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನಲಾಗಿದೆ. ಈ ಹಣದಲ್ಲಿ ಕೆಪಿಎಸ್‌ಸಿಯ ಮಾಜಿ ಅಧಿಕಾರಿಯೊಬ್ಬರಿಗೆ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಲಾಗಿದೆ ಎಂಬ ಆರೋಪವನ್ನೂ ಇ.ಡಿ. ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com