

ಇಟಗಿ (ಗದಗ): ಸೇನೆಗೆ ಸೇರುವುದು ಅನೇಕ ಯುವಕರ ಕನಸು. ಈ ಕನಸನ್ನು ನನಸಾಗಿಸಲು ಉತ್ತರ ಕರ್ನಾಟಕದ ಗ್ರಾಮೀಣ ಯುವಕರಿಗಾಗಿ ಅನ್ನದಾನೇಶ್ವರ ಮಠ ಹಾಗೂ ವಿಜಯಮಾರ್ಗ ಟ್ರಸ್ಟ್ ವತಿಯಿಂದ ಒಂದು ತಿಂಗಳ ಉಚಿತ ಸೇನಾ ನೇಮಕಾತಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ ಕೊನೆಯ ವಾರದಿಂದ ಗದಗ ಜಿಲ್ಲೆಯ ಇಟಗಿ ಗ್ರಾಮದಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 300 ಯುವಕರು ತರಬೇತಿ ಪಡೆಯುತ್ತಿದ್ದಾರೆ.
ಈ ಯುವಕರಿಗೆ ಮಠದ ವತಿಯಿಂದ ಉಚಿತ ವಸತಿ, ಊಟ ಹಾಗೂ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜಯಮಾರ್ಗ ಟ್ರಸ್ಟ್ ನಿವೃತ್ತ ಸೇನಾಧಿಕಾರಿಗಳನ್ನು ಆಹ್ವಾನಿಸಿ ಯುವಕರಿಗೆ ತರಬೇತಿ ನೀಡುತ್ತಿದೆ.
ಗ್ರಾಮೀಣ ಯುವಕರಿಗೆ ಸೇನಾ ಸೇವೆಗೆ ಸೇರ್ಪಡೆಯಾಗಲು ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ಭಾರತೀಯ ಸೇನೆ, ಗಡಿ ಭದ್ರತಾ ಪಡೆ (BSF), ಅಗ್ನಿವೀರ್ ಸೇರಿದಂತೆ ವಿವಿಧ ರಕ್ಷಣಾ ಸೇವೆಗಳ ಕುರಿತು ಮಾಹಿತಿ ನೀಡುವುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದೆ.
ಸೇನಾ ನೇಮಕಾತಿಗೆ ಅಗತ್ಯವಿರುವ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜತೆಗೆ ಯುವಕರನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಲು ಶಿಬಿರದಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ.
ಪ್ರತಿವರ್ಷ ಅನ್ನದಾನೇಶ್ವರ ಮಠ ಹಾಗೂ ವಿಜಯಮಾರ್ಗ ಟ್ರಸ್ಟ್ ವತಿಯಿಂದ ಕರ್ನಾಟಕದಾದ್ಯಂತ ಉಚಿತ ಸೇನಾ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ನಿವೃತ್ತ ಸೇನಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.
ಸೇನೆಗೆ ಸೇರಲು ಬಯಸುವ ಯುವಕರ ದೇಹದ ಮೇಲೆ ಹಚ್ಚೆ (Tatto) ಇರಬಾರದು. ತಲೆ ಅಥವಾ ದೇಹದ ಇತರ ಭಾಗಗಳಿಗೆ ಗಾಯವಾಗಿ ಹೊಲಿಗೆ ಹಾಕಿಸಿಕೊಂಡಿರುವ ಗುರುತುಗಳಿರುವವರು ಹಾಗೂ ಒಳಮುಖವಾಗಿ ಬಾಗಿದ ಮೊಣಕಾಲುಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಸೇನಾ ನೇಮಕಾತಿಗೆ ಪರಿಗಣಿಸುವುದಿಲ್ಲ ಎಂದು ಶಿಬಿರದಲ್ಲಿ ತಿಳಿಸಲಾಗುತ್ತಿದೆ.
ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿಯ ಭಾಗವಾಗಿ 1,600 ಮೀಟರ್ ದೂರವನ್ನು 5 ನಿಮಿಷ 30 ಸೆಕೆಂಡ್‌ಗಳಲ್ಲಿ ಓಡುವುದು, ಒಂದೇ ಬಾರ್‌ನಲ್ಲಿ ಸತತ 10 ಬಾರಿ ಪುಲ್‌ಅಪ್‌ಗಳನ್ನು ಮಾಡುವುದು, ಅಂಕುಡೊಂಕಾದ ಮಾರ್ಗದಲ್ಲಿ ನಡೆಯುವುದು, ಒಂಬತ್ತು ಮೀಟರ್ ಉದ್ದದ ಕಂದಕವನ್ನು ಜಿಗಿದು ದಾಟುವುದು ಹಾಗೂ 6/6 ಮಾನದಂಡದ ದೃಷ್ಟಿ ಪರೀಕ್ಷೆ ಸೇರಿದಂತೆ ವಿವಿಧ ದೈಹಿಕ ಸಾಮರ್ಥ್ಯ ಪರೀಕ್ಷೆಗಳಿಗೆ ಯುವಕರನ್ನು ಸಿದ್ಧಪಡಿಸಲಾಗುತ್ತಿದೆ.
ಈ ಶಿಬಿರಗಳಲ್ಲಿ ತರಬೇತಿ ಪಡೆದ ಅನೇಕ ಯುವಕರು ಈಗಾಗಲೇ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ. ಕೆಲವರು ಪೊಲೀಸ್ ಇಲಾಖೆಯ ಹುದ್ದೆಗಳಿಗೂ ಆಯ್ಕೆಯಾಗಿದ್ದಾರೆ.
ತರಬೇತಿಯ ಉಸ್ತುವಾರಿ ವಹಿಸಿರುವ ನಿವೃತ್ತ ಲ್ಯಾನ್ಸ್ ನಾಯಕ್ ರವಿ ಶೆಟ್ಟಿ, ಉತ್ತರ ಕರ್ನಾಟಕದ ಯುವಕರು ಭಾರತೀಯ ಸೇನೆಗೆ ಅಗತ್ಯವಿರುವ ದೈಹಿಕ ಹಾಗೂ ವೈದ್ಯಕೀಯ ಅರ್ಹತೆಗಳನ್ನು ಹೊಂದಿದ್ದಾರೆ. ಆದರೆ, ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಎದುರಿಸಲು ಸೂಕ್ತ ಸಿದ್ಧತೆ ಅಗತ್ಯವಾಗಿದೆ. ಇಂತಹ ಶಿಬಿರಗಳ ಮೂಲಕ ಯುವಕರಿಗೆ ವ್ಯವಸ್ಥಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿಬಿರಾರ್ಥಿ ಭೀಮರಾಜ್ ರಡ್ಡೇರ್ ಮಾತನಾಡಿ, ಇಲ್ಲಿ ತರಬೇತಿಗೆ ಆಯ್ಕೆಯಾಗಿರುವುದು ನನಗೆ ಸಂತಸ ತಂದಿದೆ. ಮಠದ ವತಿಯಿಂದ ಗುಣಮಟ್ಟದ ಆಹಾರದ ಜತೆಗೆ ಉತ್ತಮ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಮಾರ್ಗ ಟ್ರಸ್ಟ್ ಅಧ್ಯಕ್ಷ ಮಲ್ಲಸರ್ಜ ದೇಸಾಯಿ, ಸೇನೆಗೆ ಸೇರಲು ಆಸಕ್ತಿ ಹೊಂದಿರುವ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಒಂದು ತಿಂಗಳ ತರಬೇತಿಯ ಮೂಲಕ ಯುವಕರು ಶಿಸ್ತು, ದೈಹಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ಹೇಳುತ್ತಾರೆ.