

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇ-ಖಾತಾ ಗೆ ಅರ್ಜಿ ಸಲ್ಲಿಸಿದ್ದ ಬೆಂಗಳೂರಿನ ಹಲವು ಖಾತಾದಾರರಿಗೆ ಹಲವು ತೊಡಕುಗಳು ಎದುರಾಗುತ್ತಿದ್ದು ಆತಂಕ ಮೂಡಿದೆ.
ಹಲವು ಮಂದಿಯ ಅರ್ಜಿಗಳು ತಿರಸ್ಕೃತಗೊಂಡಿದ್ದು, ಅಸ್ಪಷ್ಟ ದಾಖಲೆಗಳ ಕಾರಣ ನೀಡಲಾಗಿದೆ. ಈ ಪೈಕಿ 5 ಸಾವಿರ ಇ ಖಾತಾಗಳು ಡೇಂಜರ್ ಝೋನ್ನಲ್ಲಿವೆ. ಖಾತಾ ಮೇಳದಲ್ಲಿ ಇ-ಖಾತಾಗೆ ಸಂಬಂಧಿಸಿದ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಖಾತಾದಾರರಿಗೆ ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದ್ದಾರೆ. ಶನಿವಾರ ಖಾತಾ ಮೇಳ ನಡೆಯಲಿದ್ದು, ಗೊಂದಲ ಇರುವ ಖಾತಾದಾರರಿಗೆ ಪರಿಹಾರ ಸಿಗಲಿದೆ.
ಇ-ಖಾತಾಗೆ ಅಪ್ಲೈ ಮಾಡಿದರೂ ಖಾತಾಗೆ ಅನುಮೋದನೆ ಆಗುತ್ತಿಲ್ಲ, ಸಾಕಷ್ಟು ಸಮಸ್ಯೆ ಇದೆ, ತಾಂತ್ರಿಕ ದೋಷ ಇದೆ, ಜೊತೆಗೆ ಸಾಫ್ಟ್ವೇರ್ ಸಮಸ್ಯೆ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ಇ ಖಾತಾಗೆ ಅರ್ಜಿ ಸಲ್ಲಿಕೆ ಮಾಡಿದ್ದ 5 ಸಾವಿರ ಖಾತಾಗಳು ರಿಜೆಕ್ಟ್ ಆಗಿವೆ ಎಂಬ ಮಾಹಿತಿ ಬಂದಿದೆ. ಅಸ್ಪಷ್ಟವಾದ ದಾಖಲೆ, ಲೊಕೇಷನ್ ಸರಿಯಾಗಿ ನಮೂದು ಮಾಡದೇ ಇರುವುದು, ಟ್ರ್ಯಾಕಿಂಗ್ ಸರಿಯಾಗಿ ಅಪ್ಲೋಡ್ ಮಾಡದೇ ಇರುವುದು. ನಕ್ಷೆ ಕೂಡ ಸರಿಯಾಗಿ ಅಪ್ಲೈ ಮಾಡದೇ ಇರೋದೆ ಖಾತಾ ತಿರಸ್ಕೃತಗೊಳ್ಳುವುದಕ್ಕೆ ಮೂಲ ಕಾರಣ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶೇ.80ರಷ್ಟು ಜನ ಸರಿಯಾದ ದಾಖಲಾತಿ ನೀಡಿಲ್ಲ. ಶೇ.20ರಷ್ಟು ತಪ್ಪು ಅಧಿಕಾರಿಗಳದ್ದು ಇದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರಿಂದ ಇ-ಖಾತಾಗಳು ಅನುಮೋದನೆಯಾಗದೇ ತಿರಸ್ಕೃತಗೊಂಡಿವೆ ಎಂದು ತಿಳಿಸಿದ್ದಾರೆ. ಈ ರೀತಿ ಗೊಂದಲಮಯವಾದ ಇ – ಖಾತಾ ಸಮಸ್ಯೆಗಳನ್ನ ಸರಿಪಡಿಸಿಕೊಳ್ಳುವುದಕ್ಕಾಗಿಯೇ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಅಕ್ಟೋಬರ್ 31ರ ಶನಿವಾರ ಆರ್ಓ, ಎಆರ್ಓ ಮತ್ತು ಜಿಬಿಎ ಮೈದಾನದಲ್ಲಿ ಖಾತಾ ಮೇಳ ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ಸೂಕ್ತ ದಾಖಲಾತಿ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ.
ಇನ್ನು, ಖಾತಾ ಮೇಳಕ್ಕೆ ತೆರಳುವ ಖಾತಾದಾರರು ಇ-ಖಾತಾದಲ್ಲಿ ಆಗಿರುವ ದೋಷ ತಿದ್ದುಪಡಿಗೆ ಸೂಕ್ತ ದಾಖಲಾತಿ ನೀಡಬೇಕು. ತೆರಿಗೆ ಪಾವತಿ ರಶೀದಿ, ಸೇಲ್ ಡೀಡ್, ಜಿಪಿಎಸ್ ಲೊಕೇಷನ್ ಪೋಟೋ, ಚೆಕ್ಬಂದಿ ವಿವರ ಕೂಡ ನೀಡಬೇಕು. ಇಲ್ಲದೇ ಇದ್ದರೆ ಮತ್ತೆ ಸಮಸ್ಯೆ ಆಗಲಿದೆ.