

ಬೆಂಗಳೂರು: ಕೇಂದ್ರ ಸರ್ಕಾರ ಕಬ್ಬು ಬೆಳೆಯುವ ರೈತರನ್ನು ಉಳಿಸಲು ಸಕ್ಕರೆ ಕನಿಷ್ಠ ದರ (MSP)ವನ್ನು 50 ರೂ.ಗೆ ಹೆಚ್ಚಿಸಬೇಕು. ಹಾಗಾದರೆ ಮಾತ್ರ ರೈತರಿಗೆ ಒಳ್ಳೆಯ ಬೆಲೆ ನೀಡಲು ಸಾಧ್ಯ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸಿಎಂ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ನಾನು ರೈತರಿಗೆ ಮನವಿ ಮಾಡುವುದು ಇಷ್ಟೇ. ದಯವಿಟ್ಟು ಪ್ರತಿಭಟನೆ ಮಾಡಬೇಡಿ. ಆವತ್ತು ಮಾತು ಕತೆ ಏನಾಗಿತ್ತೋ ಅದನ್ನು ಪಾಲಿಸಿ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನಿಮಗೆ ಕಾರ್ಖಾನೆಗಳಿಂದ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ಈ ವಿಚಾರವಾಗಿಯೇ ನಿನ್ನೆ ಪ್ರಧಾನಿಗಳಿಗೆ ನಾನು ಪತ್ರ ಬರೆದಿದ್ದೇನೆ. ಇವತ್ತು ನಾಳೆಯಲ್ಲಿ ಕೇಂದ್ರದ ಮಂತ್ರಿಗಳನ್ನು ಸಂಪರ್ಕ ಮಾಡಿ ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು.
'ರೈತರೇ ನೀವು ಮಾಡುತ್ತಿರುವ ಹಠವನ್ನು ನಿಲ್ಲಿಸಿ. ಇದರಿಂದ ಕಬ್ಬು ಬೆಳೆಗಾರರು ಬದುಕಿರುವಾಗಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಬ್ಬು ಒಣಗಿದರೆ ರಸ ಕಡಿಮೆಯಾಗುತ್ತದೆ. ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಕಾರ್ಖಾನೆಗಳು ಕಬ್ಬನ್ನು ಅರೆಯಲಿ. ಕೇಂದ್ರ ಸರ್ಕಾರ ಸೆಪ್ಟೆಂಬರ್ ನಲ್ಲೇ ಕಬ್ಬು ಅರೆಸಿ ಎಂದು ಹೇಳಿತ್ತು. ನಾನು ರೈತರನ್ನು ಕರೆದು ಕೇಳಿದಾಗ, ಈಗ ಕಬ್ಬಿನಲ್ಲಿ ರಸ ಕಡಿಮೆ ಇದೆ ಅಂತ ಹೇಳಿದರು. ಈಗ ಕಬ್ಬು ಅರೆಯಲು ಸರಿಯಾದ ಕಾಲ. ರೈತರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಕಬ್ಬು ಬೆಳೆಗಾರರೊಂದಿಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದೇನೆ. ಆಗ ಕೇಂದ್ರ ಸರ್ಕಾರದ ಸೂಕ್ತ ಬೆಲೆ ನಿಗದಿ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ಜೋಶಿ ಅವರು ಮಾತುಕೊಟ್ಟಿದ್ದರಂತೆ. ಕೇಂದ್ರ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೋ ಅದನ್ನು ಪಾಲಿಸಬೇಕು ಎಂದು ರೈತ ಮುಖಂಡರ ಮಧ್ಯದಲ್ಲಿ ಕುಳಿತು ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದೆವು. ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿ ಸದಸ್ಯರಿಗೂ ಈ ವಿಚಾರ ಹೇಳಿದ್ದೇವೆ ವಿವರಣೆ ನೀಡಿದರು.