

ಬೆಂಗಳೂರು: ನಗರದ ಐಷಾರಾಮಿ ಹೊಟೇಲ್ ನ ಈಜುಕೊಳದಲ್ಲಿ ನಿನ್ನೆ ಶುಕ್ರವಾರ ಸಾಯಂಕಾಲ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟಿದ್ದು ವಿದ್ಯುತ್ ಪ್ರವಹಿಸಿ ಅವಘಡ ಉಂಟಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅವರನ್ನು ರಕ್ಷಿಸಲು ಯತ್ನಿಸಿದ ಅಮೆರಿಕ ಪ್ರಜೆ ಸೇರಿದಂತೆ ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲಸೂರಿನ ಕಾನ್ರಾಡ್ ಹೊಟೇಲ್ ನ ಮೂರನೇ ಮಹಡಿಯಲ್ಲಿರುವ ಈಜುಕೊಳದ ಡೆಕ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಾಥೆ ತಿಳಿಸಿದ್ದಾರೆ. ಮೃತಪಟ್ಟವರನ್ನು ಜರ್ಮನಿ ಮತ್ತು ಸ್ಲೊವಾಕಿಯಾ ದೇಶಗಳ ಪ್ರಜೆಗಳು ಎಂದು ಗುರುತಿಸಲಾಗಿದೆ.
ಈಜುಕೊಳದಲ್ಲಿದ್ದ ಇಬ್ಬರು ವಿದ್ಯುತ್ ಪ್ರವಹಿಸಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವುದನ್ನು ಗಮನಿಸಿದ ಹೊಟೇಲ್ ನಲ್ಲಿ ತಂಗಿದ್ದ ಅಮೆರಿಕ ಪ್ರಜೆ ಹಾಗೂ ಭಾರತೀಯ ಈಜುಕೊಳದ ಸಿಬ್ಬಂದಿ ಅವರನ್ನು ರಕ್ಷಿಸಲು ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಕ್ಷಿಸಲು ಮುಂದಾದ ಇಬ್ಬರಿಗೂ ಗಾಯಗಳಾಗಿದ್ದು, ತಕ್ಷಣವೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.