

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಸಮೀಪ ಗುರುವಾರ ರಾತ್ರಿ ಘೋರ ದುರಂತವೊಂದು ನಡೆದಿದ್ದು, ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಆಂಧ್ರ ಪ್ರದೇಶದ ಗುಂತಕಲ್ ಮೂಲದ ವರ್ಷಿತಾ(20) ಎಂದು ಗುರುತಿಸಲಾಗಿದೆ. ವರ್ಷಿತಾ ಗೀತಂ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಬಿಟೆಕ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು.
ಪೋಷಕರಿಗೆ ಕೊನೆಯ ಸಂದೇಶ
ವಿದ್ಯಾರ್ಥಿನಿ ಸಾವಿಗೂ ಮುನ್ನ ತನ್ನ ತಂದೆ ಹಾಗೂ ತಾಯಿಗೆ ಪೋನ್ನಲ್ಲಿ ಕೊನೆಯ ಸಂದೇಶ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ. ʻI Love You Dad, I Love You Momʼ ಎಂದು ಪೋಷಕರಿಗೆ ಸಂದೇಶ ಕಳುಹಿಸಿದ್ದಾಗಿ ತಿಳಿದುಬಂದಿದೆ.
ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ
ವರ್ಷಿತಾ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಳು. ಅಲ್ಲದೆ, ಕಳೆದ ಎರಡು ದಿನಗಳಿಂದ ಊಟವನ್ನೂ ಮಾಡಿರಲಿಲ್ಲ. ಗುರುವಾರ ರಾತ್ರಿ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.