

ಬೆಂಗಳೂರು: ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸ್ಯಾಂಡಲ್‌ವುಡ್ ಖ್ಯಾತ ನಟ 'ದುನಿಯಾ' ವಿಜಯ್ ಅವರ ಪುತ್ರ ಸಾಮ್ರಾಟ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
'ದುನಿಯಾ' ವಿಜಯ್ ಅವರ ಪುತ್ರ ಸಾಮ್ರಾಟ್, ತನ್ನ ಸಹಪಾಠಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಕಾರು ಓವರ್‌ಟೇಕ್ ಮಾಡಿದ ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ, ಕೊನೆಗೆ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಅಂತ್ಯವಾಗಿದೆ.
ಸಾಮ್ರಾಟ್ ಹಾಗೂ ಅವರ ಸ್ನೇಹಿತರು ಸೋಮವಾರ ಸಂಜೆ ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮನೀಶ್ ಗೌಡ ಮತ್ತು ಆತನ ಸ್ನೇಹಿತರು ಐ20 ಕಾರಿನಲ್ಲಿ ಬಂದು ಸಾಮ್ರಾಟ್ ಅವರ ಕಾರನ್ನು ಓವರ್ ಟೇಕ್ ಮಾಡಿದ್ದಾರೆ ಎನ್ನಲಾಗಿದೆ.
ಓವರ್‌ಟೇಕ್ ವಿಚಾರ ಸಂಬಂಧ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ಗಲಾಟೆ ವಿಚಾರವಾಗಿ ಇಂದು ಮಧ್ಯಾಹ್ನ ಮತ್ತೆ ಮೈಸೂರು ರಸ್ತೆಯಲ್ಲಿರುವ ಆರ್‌ವಿ ಯೂನಿವರ್ಸಿಟಿ ಆವರಣದ ಹೊರಗಡೆ ಮನೀಶ್ ನಿಂತಿದ್ದಾಗ, ದುನಿಯಾ ವಿಜಯ್ ಪುತ್ರ ಹಾಗೂ ಆತನ ಬೆಂಬಲಿಗರು ಬಲವಂತವಾಗಿ ತಮ್ಮ ಕಾರಿನಲ್ಲಿ ಎಳೆದೊಯ್ದಿದ್ದಾರೆ. ಚಲಿಸುವ ಕಾರಿನಲ್ಲಿಯೇ ಆತನ ಮೇಲೆ ವಿಜಯ್ ಪುತ್ರ ಮತ್ತು ಆತನ ಸ್ನೇಹಿತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಮನೀಶ್ ಹಾಗೂ ಸಾಮ್ರಾಟ್ ಇಬ್ಬರೂ ಆರ್‌ವಿ ಯೂನಿವರ್ಸಿಟಿಯ ಸಹಪಾಠಿಗಳಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮನೀಶ್ ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ಮನೀಶ್, ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದುನಿಯಾ ವಿಜಯ್ ಪುತ್ರ ಹಾಗೂ ಆತನ ಗೆಳೆಯರ ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.