

ಬೆಂಗಳೂರು: ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳು, ಸಲಹೆಗಳು ಹಾಗೂ ಕರ್ತವ್ಯದ ವೇಳೆ ಎದುರಿಸುತ್ತಿರುವ ಸವಾಲುಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೋಮವಾರ ಹೇಳಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯ್ದ ಪೊಲೀಸ್ ಆಯುಕ್ತರ ಕಚೇರಿಗಳು ಹಾಗೂ ಜಿಲ್ಲಾ ಪೊಲೀಸ್ ಘಟಕಗಳ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರಿಯಾಂಕ್ ಖರ್ಗೆ ಸಂವಾದ ನಡೆಸಿದರು.
ಪೊಲೀಸ್ ಕಲ್ಯಾಣ, ಕೆಲಸದ ಪರಿಸ್ಥಿತಿ, ಕಾರ್ಯಾಚರಣೆಯ ಸವಾಲುಗಳು ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟ ಸುಧಾರಣೆ ಕುರಿತು ಸಿಬ್ಬಂದಿಯಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದರು.
ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಬೆಳಗಿನ ಅವಧಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳು ಭಾಗವಹಿಸಿದರೆ, ಮಧ್ಯಾಹ್ನದ ಅವಧಿಯಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ನಿಂದ ಪೊಲೀಸ್ ಇನ್‌ಸ್ಪೆಕ್ಟರ್‌ವರೆಗಿನ ಸಿಬ್ಬಂದಿ ಪಾಲ್ಗೊಂಡರು.
ಪೊಲೀಸ್ ಇಲಾಖೆಯ ವೃತ್ತಿಪರ ಕಾರ್ಯ ವಾತಾವರಣ ಸುಧಾರಿಸುವುದು ಹಾಗೂ ಪೊಲೀಸ್ ಸೇವೆಯ ಗುಣಮಟ್ಟ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿಬ್ಬಂದಿ ಹಲವು ಸಲಹೆಗಳನ್ನು ಗೃಹ ಸಚಿವರ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.