

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ನಾಳೆ, ಸೆಪ್ಟೆಂಬರ್ 4, 2026ರ ಶುಕ್ರವಾರ, ಬೆಂಗಳೂರಿನಾದ್ಯಂತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಧಾರ್ಮಿಕ ಹಬ್ಬದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕೃತ ಸುತ್ತೋಲೆ ಹೊರಡಿಸಿದ್ದು, ತನ್ನ ವ್ಯಾಪ್ತಿಯ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಕಸಾಯಿಖಾನೆಗಳು ಹಾಗೂ ಚಿಕನ್, ಮಟನ್ ಮತ್ತು ಮೀನು ಮಾರಾಟ ಮಾಡುವ ಎಲ್ಲಾ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
ನಾಳೆ ರಾಜಧಾನಿಯಲ್ಲಿ ಸಿಗಲ್ಲ ಮಾಂಸ!
ಧಾರ್ಮಿಕ ಹಬ್ಬದ ಗೌರವಾರ್ಥವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಸುತ್ತೋಲೆಯಲ್ಲಿ, ತನ್ನ ವ್ಯಾಪ್ತಿಯಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.
ಕಸಾಯಿಖಾನೆಗಳು: ಎಲ್ಲಾ ಅಧಿಕೃತ ಮತ್ತು ಅನಧಿಕೃತ ಕಸಾಯಿಖಾನೆಗಳನ್ನು ಕಡ್ಡಾಯವಾಗಿ ಮುಚ್ಚಬೇಕು.
ಚಿಲ್ಲರೆ ಅಂಗಡಿಗಳು: ಚಿಕನ್, ಮಟನ್, ಬೀಫ್ ಮತ್ತು ಮೀನು ಮಾರಾಟ ಮಾಡುವ ಎಲ್ಲಾ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು: ಹೋಟೆಲ್‌ಗಳಲ್ಲಿ ಹಸಿ ಮಾಂಸದ ಮಾರಾಟ ಅಥವಾ ಸಂಸ್ಕರಣೆಗೆ ಅವಕಾಶವಿರುವುದಿಲ್ಲ.
ಚಿಕನ್ ಅಂಗಡಿಗಳ 'ಡಬಲ್ ಬಂದ್'
ಚಿಕನ್ ಅಂಗಡಿಗಳ 'ಡಬಲ್ ಬಂದ್'
ಏತನ್ಮಧ್ಯೆ, ಈಗಾಗಲೇ ಬೆಂಗಳೂರಿನ ಸಾವಿರಾರು ಚಿಕನ್ ಅಂಗಡಿಗಳು ಇಂದು (ಸೆಪ್ಟೆಂಬರ್ 3, ಗುರುವಾರ) ದಿನದಿಂದಲೇ ಮುಚ್ಚಲ್ಪಟ್ಟಿವೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಜಾರಿಗೆ ತಂದಿರುವ ಪ್ರತಿ ಕೆಜಿ ಕೋಳಿ ತ್ಯಾಜ್ಯಕ್ಕೆ ₹5 ಸಂಗ್ರಹಣಾ ಶುಲ್ಕವನ್ನು ವಿರೋಧಿಸಿ, ಕರ್ನಾಟಕ ಕೋಳಿ ವ್ಯಾಪಾರಿಗಳ ಸಂಘ (KPTA) ಸೆಪ್ಟೆಂಬರ್ 3 ಮತ್ತು 4 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.
ಮುಂದುವರೆದು, ಜನ್ಮಾಷ್ಟಮಿ ನಿಮಿತ್ತ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಮುನ್ಸಿಪಲ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಬಿಎ ಎಚ್ಚರಿಸಿದೆ. ಇನ್ನು, ಶನಿವಾರ ಅಂದರೆ ಸೆಪ್ಟೆಂಬರ್ 5ರ ಬೆಳಿಗ್ಗೆಯಿಂದ ಎಂದಿನಂತೆ ಮಾಂಸ ಮಾರಾಟ ಪುನರಾರಂಭಗೊಳ್ಳಲಿದೆ.