

ಮಂಗಳೂರು: ನೈತಿಕ ಪೊಲೀಸ್‌ಗಿರಿಯ ಆರೋಪಕ್ಕೆ ಸಂಬಂಧಿಸಿದಂತೆ, ವಿವಿಧ ಧರ್ಮಗಳಿಗೆ ಸೇರಿದ ಯುವಕ-ಯುವತಿಯರ ಗುಂಪಿಗೆ ಹೊಟೇಲ್ ನಲ್ಲಿ ಕೆಲವು ರೌಡಿ ಹಿನ್ನೆಲೆಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾದ ಪ್ರಕರಣದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಒಳಗೊಂಡ ಗುಂಪು ಹೊಟೇಲ್ ನಲ್ಲಿ ಕುಳಿತಿದ್ದ ವೇಳೆ ಆರೋಪಿಗಳು ಅಲ್ಲಿಗೆ ಬಂದು ಅವರನ್ನು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಯುವಕರು ಹೊಟೇಲ್ ನಿಂದ ಹೊರಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಹೊಟೇಲ್ ಗೆ ತೆರಳಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿಗೆ ದೂರು ನೀಡುವಂತೆ ಸೂಚಿಸಿದ್ದರು. ಆದರೆ ಯುವತಿ ಹಾಗೂ ಆಕೆಯ ತಂದೆ ದೂರು ನೀಡಲು ನಿರಾಕರಿಸಿದರು. ಹೊಟೇಲ್ ಮಾಲೀಕರೂ ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ.
ಬಳಿಕ ಪೊಲೀಸರು ಹೊಟೇಲ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು, ಅದರಲ್ಲಿ ಕಂಡುಬಂದ ದೃಶ್ಯಗಳ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಯಾವುದೇ ಆಡಿಯೋ ಲಭ್ಯವಿಲ್ಲದ ಕಾರಣ, ದೃಶ್ಯಗಳಲ್ಲಿ ಕಂಡುಬಂದ ತಡೆದು ನಿಲ್ಲಿಸುವುದು ಹಾಗೂ ವಾಗ್ವಾದದ ಆಧಾರದ ಮೇಲೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯುವತಿಯ ತಂದೆ ಹಾಗೂ ಹೊಟೇಲ್ ಮಾಲೀಕರು ಹೆಚ್ಚಿನ ಜವಾಬ್ದಾರಿ ವಹಿಸಿ, ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದೆ ಬರಬೇಕಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಆರೋಪಿಗಳನ್ನು ಈಗಾಗಲೇ ಮುಂಜಾಗ್ರತಾ ಕ್ರಮದಡಿ ಬಾಂಡ್‌ಗೆ ಒಳಪಡಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಏನಿದು ಘಟನೆ
ನಿನ್ನೆ ಮೂಡುಬಿದಿರೆ ಬಸ್ ನಿಲ್ದಾಣದ ಸಮೀಪದ ಕೆಫೆಯೊಂದಕ್ಕೆ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಉಪಾಹಾರ ಸೇವಿಸಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಆರೋಪಿಗಳಾದ ರಿಥಿಲ್ ಪೂಜಾರಿ, ಪ್ರೇಮ್ ಭಂಡಾರಿ ಹಾಗೂ ಸಂಜಯ್ ಹೆಗ್ಡೆ ಅವರು ಅನುಮತಿಯಿಲ್ಲದೆ ಕೆಫೆಯೊಳಗೆ ಪ್ರವೇಶಿಸಿ, ವಿದ್ಯಾರ್ಥಿಗಳ ಗುರುತು ಹಾಗೂ ಅವರು ಅಲ್ಲಿಗೆ ಬಂದಿರುವ ಕಾರಣದ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಬಳಿಕ ಆರೋಪಿಗಳು ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಯದ ಕಾರಣದಿಂದ ವಿದ್ಯಾರ್ಥಿಗಳು ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸದೆ, ದೂರು ಕೂಡ ನೀಡಿರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪ್ರತಿಭಾ ಅವರು ಬಳಿಕ ಕೆಫೆಗೆ ತೆರಳಿ, ಅಲ್ಲಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 126(2), 352, 351(2) ಹಾಗೂ 3(5)ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಅಕ್ರಮವಾಗಿ ತಡೆಹಿಡಿಯುವುದು, ಉದ್ದೇಶಪೂರ್ವಕವಾಗಿ ಅವಮಾನಿಸುವುದು, ಕ್ರಿಮಿನಲ್ ಬೆದರಿಕೆ ಸೇರಿದಂತೆ ಸಾಮಾನ್ಯ ಉದ್ದೇಶದಿಂದ ಒಟ್ಟಾಗಿ ಎಸಗುವ ಕೃತ್ಯಗಳಿಗೆ ಸಂಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.