ಕರ್ತವ್ಯ ಲೋಪ ಸಹಿಸಲ್ಲ, ಕರ್ತವ್ಯಕ್ಕೆ ಗೈರಾದ್ರೆ ಸೇವೆಯಿಂದ ವಜಾ: ಪಾಲಿಕೆ ಸಿಬ್ಬಂದಿಗೆ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್..!

ರಸ್ತೆ, ಫುಟ್‌ಪಾತ್ ಹಾಗೂ ಸ್ಲ್ಯಾಬ್‌ಗಳ ಮೇಲೆ ಬಿದ್ದಿರುವ ನಿರ್ಮಾಣ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಿ, ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
Minister Krishna Byre Gowda
ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ಕರ್ತವ್ಯಕ್ಕೆ ಗೈರುಹಾಜರಾಗುವ ಪಾಲಿಕೆ ಸಿಬ್ಬಂದಿಗೆ ಇನ್ಮುಂದೆ ಯಾವುದೇ ವಿನಾಯಿತಿ ಇಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಿದ ಪರಿಶೀಲನೆ ವೇಳೆ ಶೇ.30ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿರುವುದು ಕಂಡುಬಂದಿದ್ದು, ಪದೇಪದೆ ಕರ್ತವ್ಯಕ್ಕೆ ಗೈರಾಗುವ ಸಿಬ್ಬಂದಿಗೆ ನೋಟಿಸ್ ನೀಡಿ, ಸಮರ್ಪಕ ಉತ್ತರ ನೀಡದಿದ್ದರೆ ಸೇವೆಯಿಂದಲೇ ವಜಾಗೊಳಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಮಹಾನಗರದ ಹೊಸ ಆಡಳಿತ ಮತ್ತು ಸೇವಾ ವಿತರಣಾ ವ್ಯವಸ್ಥೆ ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿಯ ಗೈರುಹಾಜರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಅಭಿವೃದ್ಧಿ ಹಾಗೂ ನಾಗರಿಕ ಸಮಸ್ಯೆಗಳ ಕುರಿತು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೈರುಹಾಜರಾಗುವ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು. ಅವರು ಸಮರ್ಪಕವಾಗಿ ಉತ್ತರಿಸದಿದ್ದರೆ, ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Minister Krishna Byre Gowda
'ನಿರ್ಲಕ್ಷ್ಯ ಮಾಡಿದ್ರೆ ಕ್ರಮ ಖಚಿತ': ನಗರದಲ್ಲಿ ಸಚಿವ ಕೃಷ್ಣ ಬೈರೇಗೌಡ ದಿಢೀರ್ ತಪಾಸಣೆ; ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ! Video

ಮೂರು ಟನ್ ಸಾಮರ್ಥ್ಯದ ವಾಹನಗಳಿಗೆ ಆದ್ಯತೆ

ಹೊಸ ವ್ಯವಸ್ಥೆಯಡಿ ಪ್ರಸ್ತುತ ಬಳಕೆಯಲ್ಲಿರುವ ಸುಮಾರು ಒಂದು ಟನ್ ಸಾಮರ್ಥ್ಯದ ಆಟೋ ಟಿಪ್ಪರ್‌ಗಳ ಬದಲಿಗೆ ಮೂರು ಟನ್‌ವರೆಗೆ ತ್ಯಾಜ್ಯ ಸಾಗಿಸುವ ಸಾಮರ್ಥ್ಯ ಹೊಂದಿರುವ ವಾಹನಗಳನ್ನು ಬಳಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇದಲ್ಲದೆ, ಎಲ್ಲ ತ್ಯಾಜ್ಯ ಸಂಗ್ರಹಣೆ ವಾಹನಗಳಿಗೂ ಜಿಪಿಎಸ್ ಟ್ರ್ಯಾಕಿಂಗ್ ಕಡ್ಡಾಯಗೊಳಿಸಲಾಗುವುದು. ಪ್ರತಿಯೊಂದು ವಾಹನಕ್ಕೂ ನಿರ್ದಿಷ್ಟ ಮಾರ್ಗ ನಿಗದಿಪಡಿಸಲಾಗುತ್ತದೆ. ಪ್ರತಿದಿನವೂ ವಾಹನಗಳು ನಿಗದಿತ ಮಾರ್ಗದಲ್ಲೇ ಸಂಚರಿಸುವ ಮೂಲಕ ವ್ಯವಸ್ಥಿತ ಹಾಗೂ ಹೊಣೆಗಾರಿಕೆಯ ತ್ಯಾಜ್ಯ ಸಂಗ್ರಹಣೆ ಖಚಿತಪಡಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಪ್ರಸ್ತುತ ನಗರದಲ್ಲಿ ದಿನಕ್ಕೆ ಸುಮಾರು 5,200 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯವಿದೆ. ಹೊಸ ಟೆಂಡರ್ ವ್ಯವಸ್ಥೆಯಡಿ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಸೇರಿದಂತೆ ಈ ಸಾಮರ್ಥ್ಯವನ್ನು ದಿನಕ್ಕೆ ಸುಮಾರು 9,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ನಾಗರಿಕರು ಉತ್ಪಾದಿಸುವ ಯಾವುದೇ ಪ್ರಮಾಣದ ತ್ಯಾಜ್ಯವಾಗಿದ್ದರೂ ಅದನ್ನು ಸಮರ್ಪಕವಾಗಿ ಸಂಗ್ರಹಿಸಿ, ವಿಲೇವಾರಿಗೆ ಸಾಗಿಸುವ ರೀತಿಯಲ್ಲಿ ಹೊಸ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರಮುಖ ಸಲಹೆಗಳು...

ವೈಯಕ್ತಿಕ ಮನೆಗಳ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಗೆ ಅನುದಾನ ವಿತರಣೆಯಾಗದಿರುವ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ತಂತ್ರಾಂಶದಲ್ಲಿರುವ ದೋಷಗಳನ್ನು ಸರಿಪಡಿಸುವುದು.

ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸುವ ಮುನ್ನ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು.

ಹೆಚ್ಚು ಜನಸಂಖ್ಯೆ ಹೊಂದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದು.

X
Kannada Prabha
www.kannadaprabha.com