

ಬೆಂಗಳೂರು: ವೈದ್ಯೋ ನಾರಾಯಣೋ ಹರಿ ಎನ್ನುತಾ ವೈದ್ಯರನ್ನು ಸಾಕ್ಷಾತ್ ದೇವರಾದ ನಾರಾಯಣನ ಸ್ವರೂಪವೆಂದು ಭಾವಿಸಿ ಗೌರವಿಸುವ ಪರಂಪರೆ ನಮ್ಮಲ್ಲಿದೆ. ಆದರೆ, ಕೆಲ ಕಿಡಿಗೇಡಿಗಳು ಇದನ್ನೇ ಬಳಸಿಕೊಂಡು ಮಾಡಿಕೊಂಡು, ವೈದ್ಯರ ಸೋಗಿನಲ್ಲಿ ಅಕ್ರಮ ಕ್ಲಿನಿಕ್‌ಗಳನನ್ನ ನಡೆಸುತಿದ್ದಾರೆ. ಅದರಂತೆ, ರಾಜ್ಯಾದ್ಯಂತ ಒಟ್ಟು 582ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಅಧಿಕಾರಿಗಳು ಪತ್ತೆಹಚ್ಚಿ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:
582ಕ್ಕೂ ಹೆಚ್ಚು ನಕಲಿ ವೈದ್ಯರು!
ಕರ್ನಾಟಕದಲ್ಲಿ 2024 ರಿಂದ ಈವರೆಗೆ ಆರೋಗ್ಯ ಇಲಾಖೆಯು ಬರೋಬ್ಬರಿ 582 ನಕಲಿ ವೈದ್ಯರನ್ನು ಪತ್ತೆಹಚ್ಚಿದೆ. ಹೈಕೋರ್ಟ್ ಚಾಟಿ ಬೀಸಿದ ಬಳಿಕ 2025 ರಲ್ಲಿ ಈ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು, ನಕಲಿ ಔಷಧ ಜಾಲ ಹಾಗೂ ಅರ್ಹತೆ ಇಲ್ಲದ ಇಂತಹ ಚಿಕಿತ್ಸಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ, ಆರೋಗ್ಯ ಇಲಾಖೆಯು 2024 ಹಾಗೂ 26ರ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 582 ಕ್ಲಿನಿಕ್‌ಗಳ ವಿರುದ್ದ ಕ್ರಮ ಕೈಗೊಂಡ್ಡು, ಸಂಪೂರ್ಣವಾಗಿ ಮುಚ್ಚಲಾಗಿದೆ. ಇವರಲ್ಲಿ 87 ಮಂದಿಗೆ ದಂಡ ವಿಧಿಸಲಾಗಿದ್ದು, 29 ಜನರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.
ಎತನ್ಮಧ್ಯೆ, ಪತ್ತೆಯಾದ ಬಹುತೇಕ ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ಕಂಡುಬಂದಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ನೋಡುವುದಾದರೆ, ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 127 ಪ್ರಕರಣಗಳು ದಾಖಲಾಗಿವೆ. ರಾಯಚೂರಿನಲ್ಲಿ 124, ಧಾರವಾಡದಲ್ಲಿ 75, ಕೋಲಾರದಲ್ಲಿ 31, ವಿಜಯಪುರದಲ್ಲಿ 24, ಬಳ್ಳಾರಿಯಲ್ಲಿ 23, ದಕ್ಷಿಣ ಕನ್ನಡದಲ್ಲಿ 20, ಚಿಕ್ಕಬಳ್ಳಾಪುರದಲ್ಲಿ 17, ಬೆಂಗಳೂರು ನಗರದಲ್ಲಿ 16 ಹಾಗೂ ಕೊಪ್ಪಳದಲ್ಲಿ 14 ನಕಲಿ ವೈದ್ಯರ ಪ್ರಕರಣಗಳು ಬೆಳಕಿಗೆ ಬಂದಿವೆ.
ಹಾಗಾದ್ರೆ, ಇಂತಹ ನಕಲಿ ವೈದ್ಯರ ಹಿನ್ನೆಲೆ ಏನು?
ಆರೋಗ್ಯ ಇಲಾಖೆ ನಡೆಸಿದ ತನಿಖೆಯ ವೇಳೆ ಪತ್ತೆಯಾದ ಆಘಾತಕಾರಿ ವಿಷಯವೆಂದರೆ, ಈ ನಕಲಿ ವೈದ್ಯರಲ್ಲಿ ಬಹುತೇಕರು ಯಾವುದೇ ಅಧಿಕೃತ ಮೆಡಿಕಲ್ ಪದವಿ ಹೊಂದಿಲ್ಲ. ಬದಲಾಗಿ, ಆಸ್ಪತ್ರೆಗಳಲ್ಲಿ ನರ್ಸ್‌ಗಳು, ವಾರ್ಡ್ ಬಾಯ್‌ಗಳು ಅಥವಾ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಾ, ನೈಜ ವೈದ್ಯರು ಚಿಕಿತ್ಸೆ ನೀಡುವುದನ್ನು ನೋಡಿ ಪ್ರಾಕ್ಟಿಕಲ್ ಜ್ಞಾನ ಬೆಳೆಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿತ್ತು. ಅದೇ ಅನುಭವದ ಆಧಾರದ ಮೇಲೆ ಗ್ರಾಮೀಣ ಭಾಗಗಳಲ್ಲಿ ಸ್ವಂತ ಕ್ಲಿನಿಕ್ ತೆರೆದು ಜನರಿಗೆ ಅಲೋಪತಿ ಚಿಕಿತ್ಸೆ, ಇಂಜೆಕ್ಷನ್ ಹಾಗೂ ಗ್ಲುಕೋಸ್ ಬಾಟಲ್ ಹಾಕುವ ಕೆಲಸ ಮಾಡುತ್ತಿದ್ದರು. ಕೆಲವರು ಆಯುರ್ವೇದ ಅಥವಾ ಹೋಮಿಯೋಪತಿ ಪದವಿ ಪಡೆದಿದ್ದರೂ, ಕಾನೂನು ಬಾಹಿರವಾಗಿ ಎಗ್ಗಿಲ್ಲದೆ ಅಲೋಪತಿ ಚಿಕಿತ್ಸೆ ನೀಡುತ್ತಿದ್ದರು.
ಹಾಗಾಗಿ, ಯಾರಾದರೂ ಜ್ವರ, ಕೆಮ್ಮು ಅಥವಾ ಇನ್ಯಾವುದೇ ಕಾಯಿಲೆಗೆ ಸಿಕ್ಕ ಸಿಕ್ಕ ಕ್ಲಿನಿಕ್‌ಗಳಿಗೆ ಹೋಗುವ ಮುನ್ನ ಎಚ್ಚರ ವಹಿಸಬೇಕು. ಆಯಾ ಕ್ಲಿನಿಕ್‌ಗಳಲ್ಲಿ ವೈದ್ಯರ ಅಧಿಕೃತ ಮೆಡಿಕಲ್ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.