

ಬೆಂಗಳೂರು: ರಾಜಧಾನಿಯ ನಾಗರಿಕರ ನಾಗರಿಕ ಸಮಸ್ಯೆಗಳ ನಿವಾರಣೆಗೆ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಅಪ್‌ಡೇಟ್ ಒಂದನ್ನು ನೀಡಿದೆ.
ನಗರದಲ್ಲಿ ಮೂಲಸೌಕರ್ಯ ಹಾಗೂ ನಾಗರಿಕ ದೂರುಗಳನ್ನು ದಾಖಲಿಸಲು ಅತ್ಯಾಧುನಿಕ ತಂತ್ರಜ್ಞಾನದ 'ಸಹಾಯ 3.0' (Sahaya 3.0) ಪೋರ್ಟಲ್ ಅನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಇದರಿಂದ ಇನ್ಮುಂದೆ ಬೆಂಗಳೂರಿನ ಸಾರ್ವಜನಿಕರು ರಸ್ತೆ ಗುಂಡಿ, ಬೀದಿ ದೀಪ, ಕಸದ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಟೈಪ್ ಮಾಡುವ ಅಗತ್ಯವಿಲ್ಲ. ಕೇವಲ ಒಂದು ಧ್ವನಿ ಸಂದೇಶ (Voice Note) ರೆಕಾರ್ಡ್ ಮಾಡುವ ಮೂಲಕ ಅತ್ಯಂತ ಸರಳವಾಗಿ ದೂರನ್ನು ನೋಂದಾಯಿಸಬಹುದಾಗಿದೆ.
ನಾಗರಿಕರು ತಮ್ಮ ದೂರುಗಳನ್ನು ಸುಲಭವಾಗಿ ದಾಖಲಿಸುವುದರ ಜೊತೆಗೆ, ಅವುಗಳ ಪರಿಹಾರದಲ್ಲಿ ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪರಿಣಾಮಕಾರಿತ್ವ ಖಚಿತಪಡಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ‘ಸಹಾಯ 3.0’ ಎಂಬ ನವೀಕರಿಸಿದ ಡಿಜಿಟಲ್ ದೂರು ಪರಿಹಾರ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬುಧವಾರ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ‘ಸಹಾಯ 3.0’ ಹಾಗೂ ರಸ್ತೆ ಮೂಲಸೌಕರ್ಯ ನಿರ್ವಹಣಾ ವ್ಯವಸ್ಥೆ (RIMS) ಕುರಿತು ನಾಗರಿಕರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಚಿವರು, ನವೀಕರಿಸಿದ ವೇದಿಕೆಯನ್ನು ಜಾರಿಗೆ ತರುವ ಮುನ್ನ ನಾಗರಿಕರು ಹಾಗೂ ತಜ್ಞರಿಂದ ನೇರ ಸಲಹೆ ಮತ್ತು ಪ್ರತಿಕ್ರಿಯೆ ಪಡೆಯಲಾಗುತ್ತಿದೆ ಎಂದು ಹೇಳಿದರು.
ಹೊಸ ವ್ಯವಸ್ಥೆಯಲ್ಲಿ ನಾಗರಿಕರು ಸಮಸ್ಯೆಯ ಛಾಯಾಚಿತ್ರ, ಸ್ಥಳದ ವಿವರಗಳ ಜೊತೆಗೆ ಧ್ವನಿ ಸಂದೇಶವನ್ನೂ ಕಳುಹಿಸಿ ದೂರು ದಾಖಲಿಸುವ ಅವಕಾಶ ಕಲ್ಪಿಸುವ ಪ್ರಸ್ತಾವವಿದೆ. ಇದರಿಂದ ದೂರು ಬರೆಯುವ ಅಗತ್ಯವಿಲ್ಲದೆ ಸಮಸ್ಯೆಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ದಾಖಲಿಸಬಹುದಾಗಿದೆ. ಈ ವ್ಯವಸ್ಥೆ ದೂರು ನೋಂದಣಿಯನ್ನು ವೇಗಗೊಳಿಸುವುದರ ಜೊತೆಗೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಂವಾದಾತ್ಮಕ ನಕ್ಷೆಯ ಮೂಲಕ ನಾಗರಿಕರು ತಮ್ಮ ಸುತ್ತಮುತ್ತ ನಡೆಯುತ್ತಿರುವ ಹಾಗೂ ಪ್ರಸ್ತಾವಿತ ರಸ್ತೆ ಕಾಮಗಾರಿಗಳ ಮಾಹಿತಿಯನ್ನು ನೈಜ ಸಮಯದಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ 2022-23ರಿಂದ 2026-27ರವರೆಗೆ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಐದು ವರ್ಷಗಳ ಮಾಹಿತಿಯನ್ನು ಆರ್‌ಐಎಂಎಸ್‌ನಲ್ಲಿ ದಾಖಲಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಕಾಮಗಾರಿಗಳೂ ಇದರಲ್ಲಿ ಸೇರಿವೆ.
ಆರ್‌ಐಎಂಎಸ್‌ನಲ್ಲಿ 2,000 ಕಿಲೋಮೀಟರ್‌ಗೂ ಅಧಿಕ ರಸ್ತೆ ಕಾಮಗಾರಿಗಳ ಮಾಹಿತಿ ಇದ್ದು, ವಿವಿಧ ಸರ್ಕಾರಿ ಮೂಲಗಳಿಂದ ಒದಗಿಸಲಾದ 9,151 ಕೋಟಿ ರೂಪಾಯಿ ಅನುದಾನದ ವಿವರಗಳನ್ನೂ ಒಳಗೊಂಡಿದೆ.
ಯಾವುದೇ ಪ್ರಮುಖ ರಸ್ತೆ ಅಥವಾ ಮೂಲಸೌಕರ್ಯ ಕಾಮಗಾರಿ ಆರಂಭವಾಗುವುದಕ್ಕೂ ಕನಿಷ್ಠ ಆರು ತಿಂಗಳ ಮುನ್ನವೇ ಅದರ ಮಾಹಿತಿಯನ್ನು ವ್ಯವಸ್ಥೆಯಲ್ಲಿ ದಾಖಲಿಸುವುದು ಸೂಕ್ತ ಎಂದು ಕೃಷ್ಣ ಬೈರೇಗೌಡ ಹೇಳಿದರು. ಇದರಿಂದ ವಿವಿಧ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧ್ಯವಾಗಲಿದೆ. ಅಲ್ಲದೆ, ಮುಂಬರುವ ಕಾಮಗಾರಿಗಳಿಗೆ ಅನುಗುಣವಾಗಿ ನಾಗರಿಕರು ತಮ್ಮ ಚಟುವಟಿಕೆಗಳನ್ನು ಯೋಜಿಸಿಕೊಳ್ಳಲು ಸಹ ಅನುಕೂಲವಾಗಲಿದೆ ಎಂದರು.
ನಾಗರಿಕರ ದೂರುಗಳನ್ನು ಸ್ವೀಕರಿಸಿ ಪರಿಹರಿಸುವುದು, ಕಾಮಗಾರಿಗಳನ್ನು ಯೋಜಿಸಿ ಮೇಲ್ವಿಚಾರಣೆ ಮಾಡುವುದು, ದತ್ತಾಂಶ ನಿರ್ವಹಣೆ ಹಾಗೂ ಪಾವತಿ ಪ್ರಕ್ರಿಯೆಗಳನ್ನು ನಿರ್ವಹಿಸುವುದು ಸೇರಿದಂತೆ ಎಲ್ಲ ಕಾರ್ಯಗಳಿಗೆ ಒಂದೇ ಸಮಗ್ರ ವ್ಯವಸ್ಥೆ ಇರಬೇಕು ಎಂದು ಸಚಿವರು ಹೇಳಿದರು.
ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದ ದತ್ತಾಂಶದಲ್ಲಿನ ತಪ್ಪುಗಳು ಮತ್ತು ಅಸಮರ್ಪಕತೆಗಳನ್ನು ಕಡಿಮೆ ಮಾಡುವುದು, ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ಸುಧಾರಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳನ್ನು ಅಳವಡಿಸುವ ಉದ್ದೇಶವೂ ಆರ್‌ಐಎಂಎಸ್ ಹೊಂದಿದೆ. ರಸ್ತೆ ಅಭಿವೃದ್ಧಿ ಯೋಜನೆ, ಕಾಮಗಾರಿಗಳ ಮೇಲ್ವಿಚಾರಣೆ, ಹೂಡಿಕೆಗೆ ಆದ್ಯತೆ ನೀಡುವುದು ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ಪಾರದರ್ಶಕವಾಗಿ ಒದಗಿಸುವಲ್ಲಿ ಇದು ನೆರವಾಗಲಿದೆ ಎಂದು ಅವರು ತಿಳಿಸಿದರು.
ರಸ್ತೆ ಕಾಮಗಾರಿಗಳ ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಎಲ್ಲ ಪ್ರಕ್ರಿಯೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ತರಲು ಉದ್ದೇಶಿಸಲಾಗಿದೆ. ಇದರಿಂದ ಬೆಂಗಳೂರಿನ ರಸ್ತೆ ಮೂಲಸೌಕರ್ಯ ನಿರ್ವಹಣೆ ಹೆಚ್ಚು ಪರಿಣಾಮಕಾರಿ, ಸಮನ್ವಯಯುತ ಮತ್ತು ಪಾರದರ್ಶಕವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.