Garden cityಗೆ ಗ್ರಹಣ: 6 ವರ್ಷಗಳಿಂದ ಚುನಾಯಿತ ಆಡಳಿತವಿಲ್ಲದೆ Bengaluru ಕಂಗಾಲು; ರಸ್ತೆ ಗುಂಡಿ, ಕಸದ ಸಮಸ್ಯೆಗೆ ಮುಕ್ತಿ ಯಾವಾಗ..?

ನಗರದಲ್ಲಿ ಚುನಾಯಿತ ಪಾಲಿಕೆ ಇಲ್ಲದ ಕಾರಣ, ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಬೆಂಗಳೂರಿಗೆ ಬರಬೇಕಿದ್ದ ಸುಮಾರು 1,000 ಕೋಟಿ ರೂಪಾಯಿಗಳ ಬೃಹತ್ ಅನುದಾನ ಕೈತಪ್ಪಿ ಹೋಗಿದೆ.
AI image
ಎಐ ಸೃಷ್ಟಿತ ಚಿತ್ರ
Updated on

ಬೆಂಗಳೂರು: ಐಟಿ ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರವು ಚುನಾಯಿತ ಸ್ಥಳೀಯ ಸಂಸ್ಥೆ (ಬಿಬಿಎಂಪಿ) ಇಲ್ಲದೆ, ಆರು ವರ್ಷಗಳು ಪೂರ್ಣಗೊಂಡಿದೆ.

2020ರ ಅಕ್ಟೋಬರ್ 2 ರಂದು ಬಿಬಿಎಂಪಿ ಕಾರ್ಪೊರೇಟರ್‌ಗಳ ಅವಧಿ ಮುಗಿದ ನಂತರ ನಗರದಲ್ಲಿ ಸ್ಥಳೀಯ ಚುನಾವಣೆಗಳೇ ನಡೆದಿಲ್ಲ. ಪರಿಣಾಮವಾಗಿ ರಾಜಧಾನಿಯ 1.5 ಕೋಟಿ ಜನಸಾಮಾನ್ಯರ ಧ್ವನಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ನಗರದ ಮೂಲಭೂತ ಸಮಸ್ಯೆಗಳು ದಿನದಿಂದ ದಿನಕ್ಕೆ ನರಕಸದೃಶವಾಗುತ್ತಿವೆ.

ನಗರದಲ್ಲಿ ಚುನಾಯಿತ ಪಾಲಿಕೆ ಇಲ್ಲದ ಕಾರಣ, ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಬೆಂಗಳೂರಿಗೆ ಬರಬೇಕಿದ್ದ ಸುಮಾರು 1,000 ಕೋಟಿ ರೂಪಾಯಿಗಳ ಬೃಹತ್ ಅನುದಾನ ಕೈತಪ್ಪಿ ಹೋಗಿದೆ.

ತೀವ್ರ ಹಣಕಾಸು ಮುಗ್ಗಟ್ಟಿನಿಂದಾಗಿ ಪಾಲಿಕೆಯು ತತ್ತರಿಸುತ್ತಿದ್ದು, ಕೆಳಹಂತದ ಕಾರ್ಮಿಕರು ಹಾಗೂ ಸ್ಮಶಾನ ಕಾವಲುಗಾರರಿಗೂ ಸಕಾಲಕ್ಕೆ ವೇತನ ನೀಡಲಾಗದ ದುಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಹಂಚಿಕೆ ಮಾಡಲು ಅಥವಾ ವಿಕೇಂದ್ರೀಕರಿಸಲು ರಾಜ್ಯ ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ.

ವಿಕೇಂದ್ರೀಕರಣದ ಪ್ರಜಾಪ್ರಭುತ್ವ ಮೌಲ್ಯಗಳ ಫಲಾನುಭವಿಗಳಾದ ಜನರಿಗೆ ಆಡಳಿತದಲ್ಲಿ ನಿಜವಾಗಿಯೂ ಹೇಳಿಕೆ ನೀಡುವ ಅವಕಾಶವಿದೆಯೇ? ಬಲವಂತ್‌ ರೈ ಸಮಿತಿ, ಅಶೋಕ್‌ ಮೆಹ್ತಾ ಸಮಿತಿ ಹಾಗೂ 74ನೇ ಸಂವಿಧಾನ ತಿದ್ದುಪಡಿಯ ಶಿಫಾರಸುಗಳನ್ನು ಅಕ್ಷರಶಃ ಜಾರಿಗೊಳಿಸಲಾಗುತ್ತಿದೆಯೇ?

ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ 18 ಆಡಳಿತಾತ್ಮಕ ಕಾರ್ಯಗಳನ್ನು ವಹಿಸಲಾಗಿದೆಯೇ? ಇಲ್ಲದಿದ್ದರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರ ಗಂಭೀರವಾಗುವಂತೆ ಒತ್ತಾಯಿಸಲು ಜನಾಂದೋಲನ ನಡೆಯಬೇಕು,” ಎಂದು ಸೇಕ್ರೆಡ್‌ ಹಾರ್ಟ್‌ ಮಹಿಳಾ ಪದವಿ ಕಾಲೇಜಿನ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಆಲ್ಬರ್ಟ್‌ ಸ್ಮಿತ್‌ ಹೇಳಿದ್ದಾರೆ.

ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ದೊಡ್ಡ ನಗರ ಸಮಸ್ಯೆಗಳವರೆಗೆ ಚುನಾಯಿತ ನಗರ ಸಂಸ್ಥೆ ಇಲ್ಲದ ಕಾರಣ ಸಂಪೂರ್ಣ ಆಡಳಿತ ವ್ಯವಸ್ಥೆಯೇ ನಿಷ್ಕ್ರಿಯಗೊಂಡಂತೆ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೇ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಗೂಂಡಾಗಳು ಮತ್ತು ಮಧ್ಯವರ್ತಿಗಳೇ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ಹೊರಮಾವು ಪ್ರಕ್ರುತಿ ಟೌನ್‌ಶಿಪ್‌ನ ನಿವಾಸಿಗಳು ಆರೋಪಿಸಿದ್ದಾರೆ.

AI image
ಕುಸಿಯುವ ಅಪಾಯದಲ್ಲಿರುವ ಶಿಥಿಲಗೊಂಡ ಕಟ್ಟಡಗಳನ್ನು ಕೆಡವಲು ಜಿಬಿಎ ಮುಖ್ಯ ಆಯುಕ್ತ ಆದೇಶ

ಇಲ್ಲಿ ಹಿಂದೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಮರ್ಥವಾಗಿ ನಿರ್ವಹಿಸುತ್ತಿದ್ದ ನಗರ ಪಾಲಿಕೆ ನೀರು ಸರಬರಾಜು ವ್ಯವಸ್ಥೆ ಈಗ ತಪ್ಪು ಕೈಗಳಿಗೆ ಸಿಲುಕಿದೆ. ಇಂದು ಕೆಲವೇ ವ್ಯಕ್ತಿಗಳು ನೀರು ಸರಬರಾಜಿನ ನಿಯಂತ್ರಣ ಹೊಂದಿದ್ದಾರೆ. ಯಾರಿಗೆ ನೀರು ಸಿಗಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ.

ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುವಂತಾಗಿದೆ. ಚುನಾಯಿತ ನಗರ ಸಂಸ್ಥೆ ಇದ್ದಿದ್ದರೆ ಈ ಮಹತ್ವದ ಮೂಲಸೌಕರ್ಯದ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು,” ಎಂದು ಬೆಂಗಳೂರು ಪೂರ್ವದ ಪ್ರಕ್ರುತಿ ಟೌನ್‌ಶಿಪ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಿ. ವರ್ಕಿ ಥಾಮಸ್‌ ಹೇಳಿದ್ದಾರೆ.

ಹಿಂದಿನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆಡಳಿತ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳನ್ನು ಟೀಕಿಸಿದ ಬೆಂಗಳೂರು ನವನಿರ್ಮಾಣ ಪಕ್ಷದ ಸಂಸ್ಥಾಪಕ ಶ್ರೀಕಾಂತ್‌ ನರಸಿಂಹನ್‌ ಅವರು, “74ನೇ ಸಂವಿಧಾನ ತಿದ್ದುಪಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಹಕ್ಕು ನೀಡಿದೆ. ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯಬೇಕು, ಸರ್ಕಾರಗಳು ಅನಿರ್ದಿಷ್ಟವಾಗಿ ಮುಂದೂಡಲು ಸಾಧ್ಯವಿಲ್ಲ. ಅಧಿಕಾರದಲ್ಲಿದ್ದಾಗ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಚುನಾವಣೆ ನಡೆಸಲು ನಿಜವಾದ ತುರ್ತು ತೋರಿಸಲಿಲ್ಲ.

ಏಕೆಂದರೆ ಚುನಾವಣೆ ವಿಳಂಬವಾದಷ್ಟೂ ಅಧಿಕಾರದಲ್ಲಿರುವವರಿಗೆ ಅನುಕೂಲವಾಗುತ್ತದೆ. ಇದರಿಂದ ನಗರ ಮೇಲಿನ ಅಧಿಕಾರ ಮತ್ತು ಹಣಕಾಸು ಸಂಪನ್ಮೂಲಗಳು ಶಾಸಕರು ಹಾಗೂ ಅಧಿಕಾರಿಗಳ ಬಳಿಯೇ ಕೇಂದ್ರೀಕೃತವಾಗಿರುತ್ತವೆ. ಅವರಿಗೆ ಚುನಾಯಿತ ಪಾಲಿಕೆ ಸದಸ್ಯರು ಅಥವಾ ನಾಗರಿಕರಿಗೆ ಉತ್ತರಿಸುವ ಹೊಣೆಗಾರಿಕೆಯೂ ಇರುವುದಿಲ್ಲ ಎಂದು ತಿಳಿಸಿದರು.

ಆಮ್‌ ಆದ್ಮಿ ಪಕ್ಷದ ನಾಯಕಿ ಉಷಾ ಮೋಹನ್‌ ಮಾತನಾಡಿ, ಉದ್ದೇಶಪೂರ್ವಕವಾಗಿ ಸೃಷ್ಟಿಯಾಗಿರುವ ಈ ಆಡಳಿತಾತ್ಮಕ ಶೂನ್ಯತೆ ಬೆಂಗಳೂರಿನ ನಗರ ಆಡಳಿತವನ್ನು ತೀವ್ರವಾಗಿ ದುರ್ಬಲಗೊಳಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಆರ್ಥಿಕ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು, ವಿಫಲವಾಗುತ್ತಿರುವ ಒಳಚರಂಡಿ ವ್ಯವಸ್ಥೆ, ಅಸಮರ್ಪಕ ಕಸ ನಿರ್ವಹಣೆ ಹಾಗೂ ಕಾರ್ಯನಿರ್ವಹಿಸದ ಬೀದಿ ದೀಪಗಳಂತಹ ಸಮಸ್ಯೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಸ್ಥಳೀಯ ಹಾಗೂ ದಿನನಿತ್ಯದ ಸಮಸ್ಯೆಗಳಿಗೆ ನಾಗರಿಕರು ತಮ್ಮ ಕ್ಷೇತ್ರದ ಶಾಸಕರನ್ನು ಸಂಪರ್ಕಿಸುವಂತೆ ನಿರೀಕ್ಷಿಸುವುದು ಕಾರ್ಯಸಾಧ್ಯವೂ ಅಲ್ಲ, ದೀರ್ಘಕಾಲ ಮುಂದುವರಿಯುವಂತಹ ವ್ಯವಸ್ಥೆಯೂ ಅಲ್ಲ ಎಂದಿದ್ದಾರೆ.

ಕೊನೆಯ ಬಾರಿ ಚುನಾವಣೆ ನಡೆದದ್ದು ಯಾವಾಗ..?

  • ಬೆಂಗಳೂರಿನ ಹಿಂದಿನ ನಗರ ಸ್ಥಳೀಯ ಸಂಸ್ಥೆ ಬಿಬಿಎಂಪಿಗೆ ಕೊನೆಯ ಚುನಾವಣೆ ನಡೆದದ್ದು: 2015

  • ಬೆಂಗಳೂರನ್ನು ಚುನಾಯಿತ ಸಂಸ್ಥೆ ಕೊನೆಯ ಬಾರಿಗೆ ಆಡಳಿತ ನಡೆಸಿದ ದಿನ: ಸೆಪ್ಟೆಂಬರ್‌ 10, 2020

  • ಬಿಬಿಎಂಪಿಯ ಒಟ್ಟು ವಾರ್ಡ್‌ಗಳು: 198

  • ವಾರ್ಡ್‌ ಪುನರ್ವಿಂಗಡಣೆ ಬಳಿಕ: 243 (ಬಿಜೆಪಿ 2019-23), 225 (ಕಾಂಗ್ರೆಸ್‌ 2023-25)

  • ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಡಿಯಲ್ಲಿ: 369 ವಾರ್ಡ್‌ಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com