

ಕೆಜಿಎಫ್ (ಕೋಲಾರ): ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಭಾನುವಾರ ಬೆಳ್ಳಂಬೆಳಿಗ್ಗೆ ಅಚ್ಚರಿಯ ದೃಶ್ಯವೊಂದು ಎದುರಾಯಿತು. ಅದುವೇ, ರಸ್ತೆಯ ತುಂಬಾ ರಾಶಿ ರಾಶಿಯಾಗಿ ಹರಡಿದ್ದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಅವುಗಳನ್ನು ಯಾರೂ ಕೊಂಡೊಯ್ಯದಂತೆ ಲಾಠಿ ಹಿಡಿದು ಕಾಯುತ್ತಿದ್ದ ಪೊಲೀಸರು ಎಲ್ಲರ ಗಮನ ಸೆಳೆದರು. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಹಾದುಹೋಗುವ ಚೆನ್ನೈ - ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ, ಬೆಂಗಳೂರಿನಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಇನ್ನು, ಲಾರಿ ಮಗುಚಿ ಬಿದ್ದ ರಭಸಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ರಸ್ತೆಯುದ್ದಕ್ಕೂ ಸಂಪೂರ್ಣವಾಗಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡವು, ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏತನ್ಮಧ್ಯೆ, ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ದುಬಾರಿಯಾಗಿರುವುದರಿಂದ, ರಸ್ತೆಯಲ್ಲಿ ಬಿದ್ದ ಸರಕನ್ನು ಸಾರ್ವಜನಿಕರು ಹಾಗೂ ಸ್ಥಳೀಯರು ಲೂಟಿ ಮಾಡಬಹುದು ಎಂಬ ಭೀತಿಯಿತ್ತು. ಈ ಕಾರಣಕ್ಕಾಗಿ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಬೇತಮಂಗಲ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದು, ಸರಕು ಕಳ್ಳತನವಾಗದಂತೆ ಕಾವಲು ನಿಂತರು. ಆದರೆ, ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲೇ ಲಾರಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಹಾಗಾಗಿ, ಪೊಲೀಸರು ಕಾವಲು ಕಾಯುವುದರ ಜೊತೆಗೆ ಕ್ರೇನ್ ಬಳಸಿ ಲಾರಿಯನ್ನು ಪಕ್ಕಕ್ಕೆ ಸರಿಸಿ, ರಸ್ತೆಯನ್ನು ಸ್ವಚ್ಛಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.