

ಬೆಂಗಳೂರು: ಮುಂಜಾನೆ ಅರ್ಜೆಂಟ್ ಆಗಿ ಹೊರಟ ಪ್ರಯಾಣಿಕನಿಗೆ ಆ ರೈಡ್ ಇಷ್ಟೊಂದು ದೊಡ್ಡ ಆಘಾತ ತರುತ್ತದೆ ಎಂದು ಕನಸಲ್ಲೂ ಅನಿಸಿರಲಿಲ್ಲ. ಯಾಕಂದ್ರೆ, ಬೈಕ್ ಚಾರ್ಜಿಂಗ್ ಪಾಯಿಂಟ್ ನಂಬಿ ಲಕ್ಷ ರೂಪಾಯಿ ಬೆಲೆಯ ದುಬಾರಿ ಫೋನ್ ಕೈಗಿಟ್ಟ ಯುವಕನಿಗೆ ಕಾದಿತ್ತು ನಯವಂಚಕನ ಪಕ್ಕಾ ಪ್ಲ್ಯಾನ್. ಅದುವೇ, ಟೈರ್‌ನಲ್ಲಿ ಗಾಳಿ ಇಲ್ಲವೆಂದು ಕೆಳಗಿಳಿಸಿ ಕ್ಷಣಾರ್ಧದಲ್ಲಿ ರ್ಯಾಪಿಡೋ ಬೈಕ್ ಚಾಲಕ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಸೆಪ್ಟೆಂಬರ್ 6ರಂದು ಮುಂಜಾನೆ ಸುಮಾರು 5:50ಕ್ಕೆ ತ್ರಿದೀಪ್ ದೇಬನಾಥ್ ಎಂಬ ಪ್ರಯಾಣಿಕರು ಬೆಂಗಳೂರಿನ ನಾರಾಯಣಪ್ಪ ಗಾರ್ಡನ್‌ನಿಂದ ಮಾರತ್‌ಹಳ್ಳಿಗೆ ತೆರಳಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಅದರಂತೆ, ಅಶುತೋಷ್ ಕುಮಾರ್ ಎಂಬ ಬೈಕ್ ಚಾಲಕ ರೈಡ್ ಒಪ್ಪಿಕೊಂಡು ಪ್ರಯಾಣಿಕನನ್ನು ಕರೆದುಕೊಂಡು ಹೊರಟಿದ್ದನು. ಪ್ರಯಾಣದ ಮಧ್ಯೆ ಪ್ರಯಾಣಿಕ ತ್ರಿದೀಪ್ ದೇಬನಾಥ್ ಅವರ ಮೊಬೈಲ್ ಬ್ಯಾಟರಿ ಖಾಲಿಯಾಗುತ್ತಾ ಬಂದಿತ್ತು. ಹಾಗಾಗಿ ಅವರು ಚಾಲಕ ಅಶುತೋಷ್ ಕುಮಾರ್ ಬಳಿ ಕೇಳಿ, ಆತನ ಬೈಕ್‌ನಲ್ಲಿದ್ದ ಚಾರ್ಜಿಂಗ್ ಸಾಕೆಟ್‌ಗೆ ತಮ್ಮ ₹1 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಅನ್ನು ಚಾರ್ಜ್ ಮಾಡಲು ಜೋಡಿಸಿದ್ದಾರೆ. ಈ ವೇಳೆ, ಫೋನ್ ತನ್ನ ಗಾಡಿಯಲ್ಲೇ ಚಾರ್ಜ್ ಆಗುತ್ತಿರುವುದನ್ನು ಗಮನಿಸಿದ ಚಾಲಕ, ಮಡಿವಾಳದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಬಂದಾಗ ಬೈಕ್ ಟೈರ್‌ನಲ್ಲಿ ಗಾಳಿ ಕಡಿಮೆ ಇದೆ ಎಂದು ನಾಟಕವಾಡಿದ್ದಾನೆ.
ಅದರಂತೆ, ಗಾಳಿ ಚೆಕ್ ಮಾಡುವ ನೆಪದಲ್ಲಿ ಪ್ರಯಾಣಿಕ ತ್ರಿದೀಪ್ ಅವರನ್ನು ಬೈಕ್‌ನಿಂದ ಕೆಳಗಿಳಿಯಲು ಹೇಳಿದ್ದಾನೆ. ಅವರು ಕೆಳಗಿಳಿಯುತ್ತಿದ್ದಂತೆ, ಚಾರ್ಜ್ ಆಗುತ್ತಿದ್ದ ಫೋನ್ ಸಮೇತ ಬೈಕ್ ಅನ್ನು ವೇಗವಾಗಿ ಓಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಹಣಕ್ಕಾಗಿ ಬ್ಲ್ಯಾಕ್‌ಮೇಲ್
ಮೊಬೈಲ್ ಕದ್ದ ಬಳಿಕ ಸಂತ್ರಸ್ತ ತ್ರಿದೀಪ್ ಬೇರೆಯವರ ಫೋನ್ ಮೂಲಕ ರ್ಯಾಪಿಡೋ ಆ್ಯಪ್‌ನಲ್ಲಿದ್ದ ಚಾಲಕನ ನಂಬರ್‌ಗೆ ಕರೆ ಮಾಡಿ ಫೋನ್ ವಾಪಸ್ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಚಾಲಕ ಅಶುತೋಷ್ ಫೋನ್ ನೀಡಲು ಬದಲಾಗಿ ₹18,000 ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಮತ್ತು ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಏತನ್ಮಧ್ಯೆ, ಸಂತ್ರಸ್ತ ಪ್ರಯಾಣಿಕರು ಈ ವಂಚನೆ ಹಾಗೂ ಕಳ್ಳತನದ ಕುರಿತು ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಪೊಲೀಸರು ರ್ಯಾಪಿಡೋ ಆ್ಯಪ್‌ನಲ್ಲಿರುವ ಚಾಲಕನ ಪ್ರೊಫೈಲ್ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.