

ಬೆಂಗಳೂರು: ರಾಜ್ಯದಲ್ಲಿನ ಕೆರೆಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮ ಸಿಂಗ್ ತಿಳಿಸಿದ್ದಾರೆ.
ರಾಜ್ಯದಲ್ಲಿನ 30,671 ಹಳ್ಳಿಗಳು, 300 ನಗರ ಸ್ಥಳೀಯ ಸಂಸ್ಥೆಗಳು ಮತ್ತು 7,128 ನಗರ ವಾರ್ಡ್ ಒಳಗೊಂಡಂತೆ ಏಳನೇ ಸಣ್ಣ ನೀರಾವರಿ ಗಣತಿ ಮತ್ತು ಎರಡನೇ ಜಲಮೂಲಗಳ (ಕೆರೆಗಳ) ಸಮೀಕ್ಷೆಯ ಕ್ಷೇತ್ರ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಮೀಕ್ಷೆಯು ರಾಜ್ಯಾದ್ಯಂತ 14,18,894 ಅಂತರ್ಜಲ ಯೋಜನೆಗಳು, 77,573 ಮೇಲ್ಮೈ ಜಲ ಯೋಜನೆಗಳು ಮತ್ತು 38,960 ಜಲಮೂಲ(ಕೆರೆಗಳು) ದಾಖಲಿಸಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಈ ಬೃಹತ್ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇದರ ಕ್ಷೇತ್ರ ಕಾರ್ಯವು ಆಗಸ್ಟ್ 2026ರಲ್ಲಿ ಪೂರ್ಣಗೊಂಡಿತು.
ಸಣ್ಣ ನೀರಾವರಿ ಸಮೀಕ್ಷೆಯು 2,000 ಹೆಕ್ಟೇರ್‌ವರೆಗೆ ನೀರಾವರಿ ಸಾಮರ್ಥ್ಯವಿರುವ ಯೋಜನೆಗಳನ್ನು ಒಳಗೊಂಡಿದ್ದರೆ, ಜಲಮೂಲಗಳ ಸಮೀಕ್ಷೆಯು ಕೆರೆಗಳು, ಕಟ್ಟೆಗಳು ಮತ್ತು ಇತರ ಜಲಮೂಲಗಳ ವಿವರಗಳನ್ನು ಸಂಗ್ರಹಿಸಿದೆ.
ಕರ್ನಾಟಕವು ಬರಗಾಲ, ಅಂತರ್ಜಲ ಕುಸಿತ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸುತ್ತಿರುವುದರಿಂದ, ನಿಖರ ಮತ್ತು ನವೀಕೃತ ಜಲ ದತ್ತಾಂಶವು ಅತ್ಯಗತ್ಯವಾಗಿದೆ. ಈ ಸಮೀಕ್ಷೆಯ ಫಲಿತಾಂಶಗಳು, ತುರ್ತು ಜಲ ಸಂರಕ್ಷಣಾ ಕ್ರಮಗಳ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ಮತ್ತು ಸಣ್ಣ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸಲು ಸರ್ಕಾರಕ್ಕೆ ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದರು.
ಸಮೀಕ್ಷೆಯ ದತ್ತಾಂಶವು ಕೇವಲ ವರದಿಗೆ ಸೀಮಿತವಾಗದೆ ಸಕ್ರಿಯವಾಗಿ ಬಳಕೆಯಾಗಬೇಕು. ಇದು ವಿಶೇಷವಾಗಿ ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳ ಪುನರುಜ್ಜೀವನ, ಅಂತರ್ಜಲ ಮರುಪೂರಣ, ತಡೆಗೋಡೆ ಅಣೆಕಟ್ಟುಗಳ (ಚೆಕ್ ಡ್ಯಾಮ್) ನಿರ್ಮಾಣ ಮತ್ತು ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.